ಮ್ಯಾಕ್ಸ್’ ಲೇಟಾದ್ರೂ ಲೇಟೆಸ್ಟ್: ಎರಡೂವರೆ ವರ್ಷದ ಬಳಿಕ ಸುದೀಪ್ ಸಿನಿಮಾ

max
Published on

ಬೆಂಗಳೂರು: ‘ವಿಕ್ರಾಂತ್ ರೋಣ’ ಬಿಡುಗಡೆಯಾಗಿ ಎರಡೂವರೆ ವರ್ಷಗಳ ಬಳಿಕ ಸುದೀಪ್ ನಾಯಕನಾಗಿ ನಟಿಸುತ್ತಿರುವ ಸಿನಿಮಾ ‘ಮ್ಯಾಕ್ಸ್’. ತಮಿಳಿನ ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಟ್ರೇಲರ್‌ನಲ್ಲಿ ಕಿಚ್ಚ ಮಿಂಚಿದ್ದು, ಅಭಿಮಾನಿಗಳಲ್ಲಿ ‘ಮ್ಯಾಕ್ಸ್’ ನಿರೀಕ್ಷೆ ಹೆಚ್ಚಿಸಿದೆ. ಇದೇ ತಿಂಗಳ 25ರಂದು ಸಿನಿಮಾ ಬಿಡುಗಡೆಯಾಗಲಿದೆ. ವರಲಕ್ಷ್ಮೀ ಶರತ್‌ಕುಮಾರ್, ಸುಕೃತಾ ವಾಗ್ಲೆ, ಸಂಯುಕ್ತ ಹೊರನಾಡು ತಾರಾಗಣದಲ್ಲಿದ್ದಾರೆ. ಇತ್ತೀಚೆಗೆ ಚಿತ್ರದ ‘ಲಯನ್ಸ್ ರೋರ್’ ಎಂಬ ಲಿರಿಕಲ್ ಆಡಿಯೋ ರಿಲೀಸ್ ಮಾಡಲಾಗಿದೆ. ‘ಸಿಂಹ ಮೆರೆಯುವ ಕಾಡಿನಲಿ, ಕದ್ದು ಬಂತು ಗುಳ್ಳೆ ನರಿ. ಸುಳ್ಳು, ಮೋಸ, ಕಪಟದಲ್ಲಿ ಸಿಂಹ ಗುಳೆಯೊಳಗೆ ನರಿ’ ಎಂದು ಸಾಗುವ ಗೀತೆಗೆ ಅನೂಪ್ ಭಂಡಾರಿ ಸಾಹಿತ್ಯ, ಅಜನೀಷ್ ಲೋಕನಾಥ್ ಸಂಗೀತವಿದ್ದು ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ನಟಿ ಸಂಯುಕ್ತಾ ಹೊರನಾಡು, ‘ಈ ಸಿನಿಮಾದಲ್ಲಿ ಕಿಚ್ಚ ಸರ್ ಡಾನ್ಸ್ ಮತ್ತು ಆ್ಯಕ್ಷನ್ ಎರಡನ್ನೂ ಒಟ್ಟಿಗೆ ನೋಡಬಹುದು’ ಎಂದರು. ಸುಕೃತಾ ವಾಗ್ಲೆ, ‘ಸುದೀಪ್ ಸರ್ ಜತೆ ಕೆಲಸ ಮಾಡಿರುವ ಬಗ್ಗೆ ಒಂದು ಶಬ್ದದಲ್ಲಿ ಹೇಳಲು ಸಾಧ್ಯವಿಲ್ಲ. ಅದೊಂದು ಯೂನಿವರ್ಸಲ್ ಅನುಭವ’ ಎಂದರು.

ವಿಳಂಬಕ್ಕೆ ಕ್ಷಮೆ ಇರಲಿ: ಆಡಿಯೋ ರಿಲೀಸ್ ಸಮಾರಂಭದಲ್ಲಿ ನಟ ಸುದೀಪ್, ‘ಎರಡೂವರೆ ವರ್ಷಗಳ ಬಳಿಕ ಸಿನಿಮಾ ರಿಲೀಸ್ ಆಗುತ್ತಿದೆ. ಮೊದಲಿಗೆ ಈ ವಿಳಂಬಕ್ಕೆ ಅಭಿಮಾನಿಗಳಲ್ಲಿ ಕ್ಷಮೆ ಕೇಳುವೆ. ಎರಡೂವರೆ ವರ್ಷ ಸಿನಿಮಾ ರಿಲೀಸ್ ಆಗುವುದು ದೊಡ್ಡದಲ್ಲ, ಆದರೆ ಆಗದಿರುವುದು ದೊಡ್ಡದೇ. ನೀವು ಇದುವರೆಗೆ ತೋರಿಸಿರುವ ಪ್ರೀತಿಯೇ ನಮಗೆ ದೊಡ್ಡ ಶಕ್ತಿ. ಲೇಟಾಗಿ ಬಂದರೂ ಲೇಟೆಸ್ಟ್ ಆಗಿ ಬರುತ್ತಿದ್ದೇವೆ. ‘ಮ್ಯಾಕ್ಸ್’ ಮ್ಯಾಕ್ಸಿಮಮ್ ಮಾಸ್‌ನೊಂದಿಗೆ ನಿಮ್ಮ ಮುಂದೆ ಬರಲಿದೆ’ ಎಂದು ಭರವಸೆ ನೀಡಿದರು.

ಸುದೀಪ್ ಪರಿಶ್ರಮಿ: ನಿರ್ಮಾಪಕ ಕಲೈಪುಲಿ ಎಸ್. ಥನು, ‘‘ಮ್ಯಾಕ್ಸ್’ ವಿಶ್ವಾದ್ಯಂತ 25ರಂದು ಬಿಡುಡಗೆಯಾಗಲಿದೆ. ಕಿಚ್ಚನ ಅಭಿಮಾನಿಗಳು ಈ ಸಿನಿಮಾ ಎಂಜಾಯ್ ಮಾಡಲಿದ್ದಾರೆ. ಸುದೀಪ್ ಆ್ಯಕ್ಷನ್ ಅವತಾರಲ್ಲಿ ಕಾಣಿಸಿಕೊಂಡಿದ್ದು, ಪ್ರತಿ ದೃಶ್ಯವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಎಲ್ಲ ವಯೋಮಾನದ ಪ್ರೇಕ್ಷಕರಿಗೂ ಇಷ್ಟವಾಗಲಿದೆ. ಸುದೀಪ್ ಒಬ್ಬ ಪರಿಶ್ರಮಿ. ಅವರು ಕೆಲಸ ಮಾಡುವ ರೀತಿ ನನಗೆ ತುಂಬಾ ಇಷ್ಟವಾಯಿತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net