

ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ತಿಂಗಳಲ್ಲಿ 150 ಬಾಣಂತಿಯರ ಸಾವು ಸಂಭವಿಸಿದೆ. ಕಳಪೆಗುಣಮಟ್ಟ ಔಷಧ ಪೂರೈಕೆಯೇ ಕಾರಣ. ನೆರೆ ರಾಜ್ಯಗಳು ಕಪ್ಪು ಪಟ್ಟಿಗೆ ಸೇರಿದ್ದ ಕಂಪನಿಗೆ ಔಷಧ ಪೂರೈಸಲು ಸರ್ಕಾರ ಆದೇಶಿಸಿದೆ. ಚುನಾವಣೆಗೆ ಹಣ ಸಂಗ್ರಹಿಸಲು ಇಂತಹ ನಿರ್ಧಾರ ತೆಗೆದುಕೊಂಡ ಅನುಮಾನವಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಗಂಭೀರ ಆರೋಪ ಮಾಡಿದರು.
ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು, ದಾವಣಗೆರೆ, ವಿಜಯನಗರ ಜಿಲ್ಲೆಗಳ ಕೆಲವು ಆಸ್ಪತ್ರೆಗಳಲ್ಲಿ ಸಂಭವಿಸಿದ ತಾಯಂದಿರ ಸಾವುಗಳ ಅಂಕಿ-ಅಂಶಗಳನ್ನು ವಿವರಿಸಿದರು.
ರಿಂಜರ್ ಲ್ಯಾಕ್ಟೇಟ್ ಇನ್ ಫ್ಯುಜನ್ ಎಂಬ ಕಳಪೆ ಔಷಧದಿಂದಲೇ ಈ ಸಾವುಗಳ ಸಂಭವಿಸಿವೆ. ಗರ್ಭಿಣಿಯರಿಗೆ ಮಾತ್ರವಲ್ಲ, ಕಿಡ್ನಿ ಕಾಯಿಲೆ, ಸುಟ್ಟಗಾಯಾಳುಗಳು ಸೇರಿ ವಿವಿಧ ಕಾಯಿಲೆಗಳಿಗೆ ಈ ಔಷಧ ನೀಡಲಾಗುತ್ತದೆ.
ತಾಯಿ, ಶಿಶು ಮರಣದ ಬಗ್ಗೆ ದಾಖಲಾಗಿ ಆಯಾ ತಿಂಗಳು ವರದಿ ಲಭ್ಯವಾಗುತ್ತದೆ. ಬೇರೆ ರೋಗಿ ಸಾವಿನ ಮಾಹಿತಿ ಲಭ್ಯವಿರುವುದಿಲ್ಲ. ಇದರಿಂದಾಗಿ ಕಳೆದ ಎರಡು 500ಕ್ಕೂ ಹೆಚ್ಚು ಜನರು ಕಳಪೆ ಔಷಧಕ್ಕೆ ಬಲಿಯಾಗಿರುವ ಶಂಕೆಯಿದ್ದು, ಕೂಡಲೇ ತನಿಖಾ ಆಯೋಗ ರಚಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪಿ.ರಾಜೀವ್ ಒತ್ತಾಯಿಸಿದರು.
ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಫೆಬ್ರವರಿಯಿಂದ ತಾಯಂದಿರ ಸಾವುಗಳಾಗುತ್ತಿವೆ. ರಿಂಜರ್ ಲ್ಯಾಕ್ಟೇಟ್ ಇನ್ ಫ್ಯುಜನ್ ಔಷಧ ಗುಣಮಟ್ಟದ ಬಗ್ಗೆ ವೈದ್ಯರ ಗುಂಪುಗಳಲ್ಲಿ ಚರ್ಚೆಯಾಗುತ್ತಿದೆ.
ಆದರೆ ರಾಜ್ಯ ಸರ್ಕಾರ ಕಳೆದ ಎರಡು ತಿಂಗಳಿಂದ ನಿದ್ರೆಯಲ್ಲಿದೆ. ಪಾವಗಡದಲ್ಲಿ ಮೂವರು ತಾಯಂದಿರ ಸಾವಿನ ಬಗ್ಗೆ ದಿಢೀರ್ ಎಚ್ಚೆತ್ತು, ಮೂವರು ವೈದ್ಯರನ್ನು ಸಸ್ಪೆಂಡ್ ಮಾಡಿ ಕೈ ತೊಳೆದುಕೊಂಡಿದೆ.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಿದೆ ಸರ್ಕಾರದ ಈ ನಡೆ. ತಾಯಂದಿರ ಸಾವಿಗೆ ಅಸಲಿ ಕಾರಣವನ್ನು ತಡವಾಗಿ ತಿಳಿದು, ಮಾ.23ರಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿತು. ಫಾಶ್ಚಿಮ್ ಬಂಗಾ ಕಂಪನಿ ಪೂರೈಸಿರುವ ನಿರ್ದಿಷ್ಟ ಬ್ಯಾಚ್‌ನ ರಿಂಜರ್ ಲ್ಯಾಕ್ಟೇಟ್ ಇನ್ ಫ್ಯುಜನ್ ಔಷಧ ಕಳಪೆ ಗುಣಮಟ್ಟದ್ದಾಗಿದೆ ಎಂದು ಔಷಧ ನಿಯಂತ್ರಕರು ಘೋಷಿಸಿದ್ದಾರೆ.
ಕಡಿಮೆ ಗುಣಮಟ್ಟದ್ದಾಗಿರುವ ಕಾರಣ ಈ ಔಷಧ ಫ್ರೀಜ್ ಮಾಡಲಾಗಿದ್ದು, ವಿತರಣೆಯಾಗಿದ್ದಲ್ಲಿ ಬಳಸಬಾರದು. ಈ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು, ವೈದ್ಯಾಧಿಕಾರಿಗಳಿಗೆ ಸುತ್ತೋಲೆಯಲ್ಲಿ ತಿಳಿಸಿದೆ.
ಬೇರೆ ರಾಜ್ಯಗಳಲ್ಲಿ ಈ ಕಂಪನಿ ಕಪ್ಪುಪಟ್ಟಿಯಲ್ಲಿದೆ. ಅಂದರೆ ಕಳಪೆ ಔಷಧ ಪೂರೈಸಿ ಅನಾಹುತಕ್ಕೆ ಕಾರಣವಾಗಿದೆ ಎಂದು ಆ ರಾಜ್ಯಗಳು ಕಪ್ಪುಪಟ್ಟಿಯಲ್ಲಿವೆ. ಅಂತಹ ಕೊಲೆಗಡುಕ ಕಂಪನಿಗೆ ಔಷಧ ಪೂರೈಸಲು ಗುತ್ತಿಗೆ ಕೊಟ್ಟವರು ಯಾರು ? ಕಿಕ್ ಬ್ಯಾಕ್ ಪಡೆದಿದ್ದೆಷ್ಟು ? ಚುನಾವಣೆಗಾಗಿ ಹಣ ಸಂಗ್ರಹಿಸಲು ಗುತ್ತಿಗೆ ನೀಡಲಾಯಿತೆ ? ಎಂದು ಪಿ.ರಾಜೀವ್ ಪ್ರಶ್ನಿಸಿದರು.
ರಾಜ್ಯ ಸರ್ಕಾರ ಕೂಡಲೇ ತನಿಖಾ ಆಯೋಗ ರಚಿಸಬೇಕು. ಕಳಪೆ ಔಷಧ ಕಾರಣಕ್ಕೆ ಬಾಣಂತಿಯರು ಮೃತಪಟ್ಟಿರುವ ಕಾರಣ ತಲಾ 25 ಲಕ್ಷ ರೂ. ಪರಿಹಾರ ನೀಡಲು ಒತ್ತಾಯಿಸುತ್ತೇವೆ. ಜತೆಗೆ ಪಕ್ಷದ ಕಾನೂನು ಪ್ರಕೋಷ್ಠದಿಂದ ದೂರು ದಾಖಲಿಸುತ್ತೇವೆ ಎಂದು ಪಿ.ರಾಜೀವ್ ತಿಳಿಸಿದರು.