ಬಂದರುಗಳಿಗೆ ರಸ್ತೆ, ರೈಲು ಸಂಪರ್ಕ ಕಲ್ಪಿಸಲು ಮಾಸ್ಟರ್‌ ಪ್ಲಾನ್‌

Minister-Mankal-Vaidya-Suggi
Published on

ಕಾರವಾರ: ರಾಜ್ಯದ ಎಲ್ಲ ಬಂದರುಗಳಿಗೆ ರಸ್ತೆ ಹಾಗೂ ರೈಲು ಸಂಪರ್ಕ ಕಲ್ಪಿಸಲು ಮಲ್ಟಿ ಮಾಡೆಲ್ ಕನೆಕ್ಟಿವಿಟಿ ಮಾಸ್ಟರ್ ಪ್ಲಾನ್ ತಯಾರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 9 ಮೀನುಗಾರಿಕೆ ಬಂದರು ಹೂಳೆತ್ತಲಾಗುತ್ತಿದೆ. ಪಾವಿನಕುರ್ವೆಯಲ್ಲಿ 14 ಎಂಟಿಪಿಎ ಸಾಮರ್ಥ್ಯದಲ್ಲಿ 3047 ಕೋಟಿ ರೂ. ವೆಚ್ಚದ ಫೀಲ್ಡ್ ಬಂದರು ಅಭಿವೃದ್ಧಿಪಡಿಸಲು ರಿಕ್ವೆಸ್ಟ್ ಫಾರ್ ಪ್ರಪೋಸಲ್ ಆಹ್ವಾನಿಸಲು ಕ್ರಮ ವಹಿಸಲಾಗಿದೆ.
ಸಾಗರ ಮಾಲಾ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ 346.06 ಕೋಟಿ ರೂ. ಮೊತ್ತದ ವಿಸ್ತ್ರತ ಯೋಜನಾ ವರದಿಯನ್ನು ಸಾಗರಮಾಲಾ ಕೋಶಕ್ಕೆ ಮಂಜೂರಾತಿಗಾಗಿ ಸಲ್ಲಿಸಲಾಗಿದ್ದು, ಅದರಲ್ಲಿ 303.46 ಕೋಟಿ ಮೌಲ್ಯದ 4 ಯೋಜನೆಗಳು ಮಂಜೂರಾಗಿವೆ. ಕಾರವಾರ ಬಂದರಿನಿಂದ ಡಿಸೆಂಬರ್‌ವರೆಗೆ 6.50 ಲಕ್ಷ ಮೆಟ್ರಿಕ್ ಟನ್ ಸರಕುಗಳನ್ನು ನಿರ್ವಹಿಸಿದ್ದು, 13.05 ಕೋಟಿ ರೂ. ಆದಾಯ ಗಳಿಸಿದೆ ಎಂದರು. ಫೆಬ್ರವರಿ ಅಂತ್ಯ ಹಾಗೂ ಮಾರ್ಚ್ ಮೊದಲ ವಾರದಲ್ಲಿ ಕರಾವಳಿ ಉತ್ಸವ ಆಚರಿಸುವ ಬಗ್ಗೆ ದಿನಾಂಕ ನಿಗದಿ ಮಾಡಲು ಯೋಜಿಸಲಾಗುತ್ತಿದೆ ಎಂದು ವಿವರಿಸಿದರು.
ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ಕಾಮಗಾರಿಯನ್ನು ಗುತ್ತಿಗೆ ಪಡೆದ ಐಆರ್‌ಬಿ ಕಂಪನಿ ನಿಲ್ಲಿಸಿದೆ. ಅದು ಬಿಜೆಪಿ ಮಂತ್ರಿಗಳಿಗೆ ಸೇರಿದ ಕಂಪನಿಯಾಗಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಕಂಪನಿ ಸ್ಪಂದನೆ ನೀಡುತ್ತಿಲ್ಲ. ಕಂಪನಿ ಬಿಟ್ಟು ಹೋಗುವುದಿದ್ದರೆ ರಾಜ್ಯ ಸರ್ಕಾರ ಅವರು ಹೂಡಿಕೆ ಮಾಡಿದ ಹಣ ನೀಡಲು ಸಿದ್ಧವಿದೆ. ಜಿಲ್ಲೆಯಲ್ಲಿ ಇನ್ನುವರೆಗೆ 1680 ಮನೆಗಳಿಗೆ ವಿದ್ಯುತ್ ಇಲ್ಲ. ಅದನ್ನು ನೀಡಲು ಕ್ರಮ ವಹಿಸಲಾಗುವುದು. ಎಂದರು.
1962 ಗೆ ಕರೆ ಮಾಡಿ
ಜಿಲ್ಲೆಯ 12 ತಾಲೂಕುಗಳಿಗೆ 12 ಪಶು ಆಂಬುಲೆನ್ಸ್ಗಳಿಗೆ ಸಚಿವ ಮಂಕಾಳ ವೈದ್ಯ ಶುಕ್ರವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಶು ವೈದ್ಯರ ತೀವ್ರ ಕೊರತೆ ಇದೆ. ಕೆಲವು ತಾಲೂಕುಗಳಲ್ಲಿ ಒಬ್ಬರೂ ವೈದ್ಯರಿಲ್ಲ. ಅವರನ್ನು ಭರ್ತಿ ಮಾಡುವ ಕಾರ್ಯ ನಡೆಯುತ್ತಿದೆ. ಈ ನಡುವೆ ಪಶು ಆಂಬುಲೆನ್ಸ್ಗಳನ್ನು ಸರ್ಕಾರ ಪರಿಚಯಿಸಿದ್ದು, ಖಾಸಗಿ ಕಂಪನಿ ಅದನ್ನು ನಿರ್ವಹಿಸಲಿದೆ. ಪಶುಗಳಿಗೆ ಅನಾರೋಗ್ಯವಾದರೆ 1962 ಸಂಖ್ಯೆಗೆ ಕರೆ ಮಾಡಿದಲ್ಲಿ ಆಂಬುಲೆನ್ಸ್ ಬರಲಿದೆ. ಆಂಬುಲೆನ್ಸ್ನಲ್ಲಿ ಒಬ್ಬ ವೈದ್ಯ, ಚಾಲಕ, ಹಾಗೂ ಒಬ್ಬ ಸಿಬ್ಬಂದಿ ಸಹ ಇರುವರು. ಈ ಆಂಬುಲೆನ್ಸ್ ಜಿಲ್ಲೆಯಲ್ಲಿ ಪಶು ವೈದ್ಯರಿಲ್ಲದೇ ಆಗುತ್ತಿರುವ ಸಮಸ್ಯೆಯನ್ನು ಕೊಂಚ ಕಡಿಮೆ ಮಾಡಬಹುದು ಎಂದರು.
ಗ್ಯಾರಂಟಿ ಯೋಜನೆ ಪ್ರಚಾರಕ್ಕೆ ಸಂವಿಧಾನ ಜಾಗೃತಿ ಜಾಥಾ
ಸಂವಿಧಾನ ಜಾಗೃತಿ ಜಾಥಾಕ್ಕೆ ಸಚಿವ ಮಂಕಾಳ ವೈದ್ಯ ಶುಕ್ರವಾರ ಚಾಲನೆ ನೀಡಿದರು. ಸಂವಿಧಾನದ ಪೀಠಿಕೆ, ಸರ್ಕಾರದ ಗ್ಯಾರಂಟಿ ಯೋಜನೆಗಳ ವಿವರ ಹಾಗೂ ಎಲ್‌ಇಡಿ ವಾಹನಗಳಿರುವ ಎರಡು ವಾಹನಗಳು ಜಿಲ್ಲೆಯ ಎಲ್ಲ 229 ಗ್ರಾಪಂಗಳಲ್ಲಿ ಸಂಚಾರ ಮಾಡಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಚಾರ ಮಾಡಲಿವೆ. ಪ್ರತಿ ವಾಹನಕ್ಕೆ 50 ಲಕ್ಷ ರೂ.ಗಳನ್ನು ಸರ್ಕಾರ ನೀಡಿದೆ. ಪ್ರತಿ ದೊಡ್ಡ ಹಳ್ಳಿಯಲ್ಲಿ ಕಾರ್ಯಕ್ರಮವೊಂದನ್ನು ಮಾಡಲಿದ್ದು, ಸ್ಥಳೀಯ ಸಂಸ್ಥೆಗಳು ತಮ್ಮ ನಿಽಯಿಂದ ಅದನ್ನು ಭರಿಸಬೇಕು ಎಂದು ಸೂಚನೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net