ಸರಣಿಯ ಎರಡನೇ ಪಂದ್ಯ ಆರಂಭಕ್ಕೂ ಮುನ್ನ Team Indiaಗೆ ಆಘಾತ; ಗಾಯದಿಂದಾಗಿ ಇಬ್ಬರು ಸ್ಟಾರ್ ಆಟಗಾರರು ಔಟ್​

Team India
Published on

ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ (Team India) ಹಾಗೂ ಇಂಗ್ಲೆಂಡ್​ (England) ನಡುವಿನ ಟಿ20 ಸರಣಿಯ ಎರಡನೇ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿದ್ದು, ಎರಡನೇ ಪಂದ್ಯದಲ್ಲೂ ಭಾರತ ತನ್ನ ಗೆಲುವಿನ ಓಟ ವಿಸ್ತರಿಸಲು ಸಜ್ಜಾಗಿದೆ. ಆಂಗ್ಲರ ವಿರುದ್ಧ ವಿರುದ್ಧ ಮುನ್ನಡೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಟೀಮ್​ ಇಂಡಿಯಾ ತಯಾರಿ ನಡೆಸುತ್ತಿರುವ ನಡುವೆಯೇ ಗಾಯದ ಸಮಸ್ಯೆಯಿಂದ ಇಬ್ಬರು ಆಟಗಾರರು ಹೊರಬಿದ್ದಿದ್ದಾರೆ.

ತಂಡದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅಭ್ಯಾಸದ ಸಮಯದಲ್ಲಿ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದಾರೆ. ಬ್ಯಾಟಿಂಗ್ ಮಾಡುವಾಗ ಅಭಿಷೇಕ್ ಅವರ ಬಲಗಾಲಿಗೆ ಇಂಜುರಿಯಾಗಿದ್ದು, ತೀವ್ರ ನೋವಿನಿಂದ ಬಳಲುತ್ತಿದ್ದ ಅಭಿಷೇಕ್ ಅಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮೈದಾನದಿಂದ ಹೊರನಡೆದಿದ್ದಾರೆ. ಹೀಗಾಗಿ ಅವರು ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವುದು ಡೌಟ್​ ಎಂದು ಹೇಳಲಾಗಿದೆ. ಇದರ ನಡುವೆ ಇಬ್ಬರು ಆಟಗಾರರು ಗಾಯದ ಸಮಸ್ಯೆಯಿಂದಾಗಿ ಹೊರಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತಂಡದ ಸ್ಟಾರ್ ಆಟಗಾರರಾದ ನಿತೀಶ್​ ಕುಮಾರ್ ರೆಡ್ಡಿ ಹಾಗೂ ರಿಂಕು ಸಿಂಗ್​ ಗಾಯಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗಿದ್ದು, ಇವರಿಗೆ ಬದಲಿಯಾಗಿ ರಮನ್​ದೀಪ್​ ಸಿಂಗ್​ರನ್ನು ನೇಮಿಸಲಾಗಿದೆ. ಸದ್ಯ ಈ ಇಬ್ಬರು ಆಟಗಾರರನ್ನು ಬಿಸಿಸಿಐ ವೈದ್ಯಕೀಯ ಘಟಕ ನಿಗಾದಲ್ಲಿ ಇರಿಸಿದ್ದು, ಮೂರನೇ ಪಂದ್ಯಕ್ಕೆ ಫಿಟ್​ ಆಗುವ ನಿರೀಕ್ಷೆ ಇದೆ. ಈ ಬಗ್ಗೆ ಬಿಸಿಸಿಐ ಇನ್ನಷ್ಟೇ ತಿಳಿಸಬೇಕಿದೆ.

ಗೌತಮ್ ಗಂಭೀರ್ ಕೋಚ್ ಆದ ಬಳಿಕ ಭಾರತ ಟೆಸ್ಟ್, ಏಕದಿನದಲ್ಲಿ ತೃಪ್ತಿದಾಯಕ ನಿರ್ವಹಣೆ ತೋರಿಲ್ಲ. ಆದರೆ ಟಿ20 ಕ್ರಿಕೆಟ್‌ನಲ್ಲಿ ಅವರು ಅಜೇಯ ದಾಖಲೆ ಹೊಂದಿದ್ದಾರೆ. ಸೂರ್ಯಕುಮಾರ್-ಗಂಭೀರ್ ಅವರ ಕ್ಯಾಪ್ಟನ್-ಕೋಚ್ ಕಾಂಬಿನೇಷನ್ ನಲ್ಲಿ ಇದುವರೆಗೆ ಆಡಿರುವ 7 ಟಿ20 ಪಂದ್ಯಗಳಲ್ಲೂ ಭಾರತ ಗೆಲುವು ಸಾಧಿಸಿದೆ ಎಂಬುದು ಗಮನಾರ್ಹ. ಕಳೆದ ವರ್ಷದ ಟಿ20 ವಿಶ್ವಕಪ್ ಗೆಲುವಿನ ಬಳಿಕ ಭಾರತದ ಚುಟುಕು ಕ್ರಿಕೆಟ್ ತಂಡ ಯುವ ಆಟಗಾರರಿಂದ ತುಂಬಿರುವ ನಡುವೆಯೂ ಭರ್ಜರಿ ಯಶಸ್ಸು ಮುಂದುವರಿಸಿದೆ.

ಚೆಪಾಕ್​ ಅಂಗಳದಲ್ಲಿ ಭಾರತ ಈವರೆಗೆ ಎರಡು ಟಿ20 ಪಂದ್ಯಗಳನ್ನು ಆಡಿದ್ದು, ಎರಡು ಪಂದ್ಯಗಳಲ್ಲೂ ಸೋಲುಂಡಿದೆ. 2012ರಲ್ಲಿ ನ್ಯೂಜಿಲೆಂಡ್​ ವಿರುದ್ಧ, 2018ರಲ್ಲಿ ವೆಸ್ಟ್​ಇಂಡೀಸ್​ ವಿರುದ್ಧ ಟೀಮ್​ ಇಂಡಿಯಾ (Team India) ಸೋಲು ಕಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net