

Flights: ನೆರೆಯ ರಾಷ್ಟ್ರ ನೇಪಾಳದಲ್ಲಿ ಸರ್ಕಾರ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿದ ಪರಿಣಾಮ ಶುರುವಾಗ ಜನರಲ್ -ಝೆಡ್ ಪ್ರತಿಭಟನೆ ಹಿಂಸಾಚಾರದ ಸ್ವರೂಪ ಪಡೆದ ಹಿನ್ನೆಲೆ ಭಾರತದಿಂದ ಕಠ್ಮಂಡುವಿಗೆ ಹೊರಡಬೇಕಿದ್ದ ನಾಲ್ಕು ವಿಮಾನಗಳನ್ನು ಏರ್ ಇಂಡಿಯಾ ರದ್ದುಗೊಳಿಸಿದೆ ಎಂದು ಮಂಗಳವಾರ(ಸೆ. 09) ವರದಿಯಾಗಿದೆ.
ಕಠ್ಮಂಡುವಿನಲ್ಲಿರುವ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿರುವುದರಿಂದ ಇಂಡಿಗೋ, ಏರ್ ಇಂಡಿಯಾ ಹಾಗೂ ನೇಪಾಳ ಏರ್‌ಲೈನ್ಸ್ ತನ್ನ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಏರ್ ಇಂಡಿಯಾ, "ಕಠ್ಮಂಡುವಿನಲ್ಲಿ ಪ್ರಸ್ತುತ ಇರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ-ಕಠ್ಮಂಡು-ದೆಹಲಿ ಮಾರ್ಗದಲ್ಲಿ ಕಾರ್ಯನಿರ್ವಹಿಸುವ AI2231/2232, AI2219/2220, AI217/218 ಹಾಗೂ AI211/212 ವಿಮಾನಗಳನ್ನು ಇಂದು ರದ್ದುಗೊಳಿಸಲಾಗಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ಹೆಚ್ಚಿನ ನವೀಕರಣಗಳನ್ನು ಹಂಚಿಕೊಳ್ಳುತ್ತೇವೆ ಎಂದು ಹೇಳಿದೆ.
ದೆಹಲಿ ಮತ್ತು ಕಠ್ಮಂಡು ನಡುವೆ ಏರ್ ಇಂಡಿಯಾ ದಿನಕ್ಕೆ ಆರು ವಿಮಾನಗಳನ್ನು ನಿರ್ವಹಿಸುತ್ತದೆ. ನೇಪಾಳವು ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಗಳನ್ನು ಎದುರಿಸುತ್ತಿದೆ. ಗೋಲಿಬಾರ್ ನಡೆದು 19 ಜನ ಮೃತಪಟ್ಟಿದ್ದು, ನೂರಾರು ಜನ ಗಾಯಗೊಂಡಿದ್ದಾರೆ. ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮಂಗಳವಾರ ರಾಜೀನಾಮೆ ನೀಡಿದ್ದಾರೆ. (ಏಜೆನ್ಸೀಸ್)