ವಿಜಯವಾಣಿ ಸುದ್ದಿಜಾಲ ಕೋಟ
ಸಂಸ್ಥೆಗಳ ಹೆಸರಿನಲ್ಲಿ ನೋಂದಣಿ ಆಗಿರುವ ವಾಹನಗಳಿಗೆ ಟೋಲ್ ಸುಂಕ ವಸೂಲಾತಿ ನಡೆಯುತ್ತಿದೆ. ಶಾಲಾ ವಾಹನಗಳಿಗೂ ತೊಂದರೆ ನೀಡಲಾಗುತ್ತಿದ್ದು, ಟೋಲ್‌ಗೆ ತೆರಳುವ ರಸ್ತೆಯು ಅವ್ಯವಸ್ಥೆಯಿಂದಿದೆ. ಸ್ಥಳೀಯ ಬೀದಿದೀಪ ಹಾಳಾಗಿ ವರ್ಷಗಳೇ ಕಳೆದವು. ಜನರಿಗೆ ತೊಂದರೆಯಾದರೆ, ಅಕ್ರಮಗಳು ನಡೆದರೆ ಸಮಿತಿಯಿಂದ ಉಗ್ರ ಹೋರಾಟ ನಡೆಸುತ್ತೇವೆ ಎಂದು ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯರಿ ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ, ಉರಿಯದ ಬೀದಿದೀಪ, ಸ್ಥಳೀಯರಿಗೆ ಸುಂಕ ವಿಧಿಸುವಿಕೆ ಸಹಿತ ಹಲವು ವಿಷಯಗಳ ಖಂಡಿಸಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ವತಿಯಿಂದ ಶನಿವಾರ ಸಾಸ್ತಾನ ಟೋಲ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಸಂದರ್ಭ ಅವರು ಮಾತನಾಡಿ, ಸಾಸ್ತಾನದಿಂದ ಕುಂದಾಪುರಕ್ಕೆ ತೆರಳುವ ಮಾರ್ಗ ಹೊಂಡಮಯವಾಗಿದೆ. ಪಾದಾಚಾರಿ ಮಾರ್ಗಗಳೂ ಇದಕ್ಕೆ ಹೊರತಾಗಿಲ್ಲ. ಇಷ್ಟಿದ್ದರೂ ಸಾರ್ವಜನಿಕರ ಮೇಲೆ ದಬ್ಬಾಳಿಕೆ ಹೆಚ್ಚಿಸುತ್ತಲೇ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೋಲಿಸ್ ಮಧ್ಯಸ್ಥಿಕೆ
ಟೋಲ್ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಬ್ರಹಾವರ ವೃತ್ತನಿರೀಕ್ಷಕ ದಿವಾಕರ್ ಮಧ್ಯಸ್ಥಿಕೆ ವಹಿಸಿ ಟೋಲ್ ಕಂಪನಿಯ ಮುಖ್ಯಸ್ಥರ ಜತೆಗೆ ಮಾತುಕತೆ ನಡೆಸಿ ಸಮಸ್ಯೆ ನಿವಾರಿಸಿದರು.
ಸೋಮವಾರ ಮತ್ತೆ ಸಭೆ
ಟೋಲ್ ಕಂಪನಿಯ ಸಿಬ್ಬಂದಿ ಬೇಜವಾಬ್ದಾರಿ ಹೇಳಿಕೆಗೆ ಆಕ್ರೋಶಗೊಂಡ ಸಮಿತಿ ಹಾಗೂ ಪ್ರತಿಭಟನಾಕಾರರನ್ನು ಪೋಲಿಸ್ ಇಲಾಖೆ ಮಧ್ಯಸ್ಥಿಕೆಯಲ್ಲಿ ರಾಜಿಗೊಂಡಿದ್ದರೂ ಟೋಲ್ ಮುಖ್ಯಸ್ಥರೊಂದಿಗೆ ಬ್ರಹ್ಮಾವರದ ವೃತ್ತನಿರೀಕ್ಷಕ ದಿವಾಕರ್ ಮಾತುಕತೆ ನಡೆಸಿ ಸೋಮವಾರ ತಹಸಿಲ್ದಾರರ್ ಕಚೇರಿಯಲ್ಲಿ ಸಭೆ ಆಯೋಜಿಸಲು ಹೆದ್ದಾರಿ ಸಮಿತಿಗೆ ತಿಳಿಸಿದರು.
ಕಳೆದ ಹತ್ತು ವರ್ಷಗಳಿಂದ ಪ್ರತಿಬಾರಿ ಟೋಲ್ ಇನ್ನಿತರ ಸಮಸ್ಯೆಗಳನ್ನು ಸೃಷ್ಟಿಸಿ ಹೆದ್ದಾರಿ ಸಮಿತಿ ಹಾಗೂ ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿದ್ದಿರಿ. ಇದೇ ರೀತಿ ಮುಂದುವರೆದರೆ ಟೋಲ್‌ಗೇಟ್‌ಗೆ ಮುಕ್ತಿಗಾಣಿಸಲಿದ್ದೇವೆ.
-ಪ್ರತಾಪ್ ಶೆಟ್ಟಿ ಸಾಸ್ತಾನ, ಜಾಗೃತಿ ಸಮಿತಿ ಮಾಜಿ ಅಧ್ಯಕ್ಷ