

ಬಂಟ್ವಾಳ: ಎಲ್ಲರಿಗೂ ಒಳಿತು ಮಾಡುವ ಧರ್ಮವೊಂದಿದ್ದಾರೆ ಅದು ಹಿಂದು ಧರ್ಮ. ಶ್ರೀರಾಮನನ್ನು ಆದರ್ಶವಾಗಿಟ್ಟು ಗ್ರಾಮ ವಿಕಾಸದ ಮೂಲಕ ರಾಮ ರಾಜ್ಯದ ಕನಸು ಸಾಕಾರಗೊಳಿಸೋಣ ಎಂದು ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ನೆತ್ತರಕೆರೆ ಗ್ರಾಮ ವಿಕಾಸ ಪ್ರತಿಷ್ಠಾನ ಹಾಗೂ ಶನೈಶ್ಚರ ಪೂಜಾ ಸೇವಾ ಸಮಿತಿ ಆಶ್ರಯದಲ್ಲಿ ಶನಿವಾರ ಸಾಮೂಹಿಕ ಶನೈಶ್ಚರ ಪೂಜೆಯ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ದ.ಕ.ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಆರ್‌ಎಸ್‌ಎಸ್ ವಿಭಾಗ ಗ್ರಾಮ ವಿಕಾಸ ಸಂಯೋಜಕ ಜಿತೆಂದ್ರ ಪ್ರತಾಪನಗರ, ಬಂಟ್ವಾಳ ತಾಲೂಕು ಸಂಘಚಾಲಕ ಡಾ.ಬಾಲಕೃಷ್ಣ, ಶನೈಶ್ಚರ ಪೂಜಾ ಸೇವಾ ಸಮಿತಿ ಅಧ್ಯಕ್ಷ ರಘುನಾಥ ಸಪಲ್ಯ, ಪ್ರತಿಷ್ಠಾನ ಸಂಯೋಜಕ ಸಂತೋಷ್ ಕುಮಾರ್ ನೆತ್ತರಕೆರೆ ಉಪಸ್ಥಿತರಿದ್ದರು.
ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ವಿದ್ಯಾರಾಜ್ ಕಾಪಿಕಾಡ್ ವಂದಿಸಿದರು. ಸಂಘಟಕ ದಾಮೋದರ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಮುರಳಿ ಭಟ್ ಕಲ್ಲತಡಮೆ ಪೌರೋಹಿತ್ಯದಲ್ಲಿ ಭಾಗ್ಯ ಸೂಕ್ತ ಹೋಮ ಹಾಗೂ ಐಕ್ಯಮತ್ಯ ಹೋಮ ನಡೆಯಿತು. ರಾತ್ರಿ ಅನ್ನಸಂತರ್ಪಣೆ ನಡೆದು ಬಳಿಕ ಬೆಂಕಿನಾಥೇಶ್ವರ ಮೇಳದಿಂದ ಯಕ್ಷಗಾನ ಬಯಲಾಟ ನಡೆಯಿತು. ಪೂಜಾ ಪೂರ್ವಭಾವಿಯಾಗಿ ಶ್ರೀಕ್ಷೇತ್ರ ಪೊಳಲಿಗೆ ಪಾದಯಾತ್ರೆ ಮೂಲಕ ತೆರಳಿ ಚಂಡಿಕಾ ಹೋಮ ನಡೆಸಲಾಯಿತು. ಎಂಟು ದಿನಗಳ ಕಾಲ ಬನ್ನಂಜೆ ಶ್ರೀ ರಾಘವೇಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಎಳ್ಳುಗಂಟು ದೀಪೋತ್ಸವ ನಡೆಯಿತು.