

ಮಸ್ಕಿ: ಈ ಬಾರಿ ಯುಗಾದಿ ಮತ್ತು ರಂಜಾನ್ ಹಬ್ಬಗಳು ಏಕಕಾಲಕ್ಕೆ ಬಂದಿದ್ದು, ಹಿಂದು ಮತ್ತು ಮುಸ್ಲಿಮರು ಶಾಂತಿಯುತವಾಗಿ ಆಚರಿಸಬೇಕೆಂದು ಸಿಪಿಐ ಬಾಲಚಂದ್ರ ಡಿ.ಲಕ್ಕಂ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಎರಡು ಸಮುದಾಯಗಳು ತಮ್ಮ ಯುವಕರಿಗೆ ಶಾಂತಿಯಿಂದ ಇರಲು ತಿಳಿಸಿ. ಅನವಶ್ಯಕವಾಗಿ ವರ್ತಿಸಿದರೆ ಕಠಿಣ ಕ್ರಮ ವಹಿಸಲಾಗುತ್ತದೆ ಎಂದರು.
ಜಿಪಂ ಮಾಜಿ ಸದಸ್ಯ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಮಸ್ಕಿ ಪಟ್ಟಣದಲ್ಲಿ ಹಿಂದು ಮುಸ್ಲಿಮರು ಸಹೋದರತ್ವದಿಂದ ಜೀವನ ನಡೆಸುತ್ತಿದ್ದು, ಯಾವುದೆ ಅಹಿತಕರ ಘಟನೆ ಜರುಗುವುದಿಲ್ಲ. ಶಾಂತಿಯಿಂದ ಹಬ್ಬ ಆಚರಿಸೋಣ ಎಂದರು.
ಪತ್ರಕರ್ತ ಅಬ್ದುಲ್ ಅಜೀಜ್ ಮಾತನಾಡಿ, ಮಸ್ಕಿಯಲ್ಲಿ ಹಿಂದು-ಮುಸ್ಲಿಮರು ಅಣ್ಣ-ತಮ್ಮಂದಿರಂತೆ ಇದ್ದೇವೆ. ಈ ಬಾರಿ ಪಟ್ಟಣದಲ್ಲಿ ರಂಜಾನ್ ದಿನವೇ ಬಣ್ಣದ ಹಬ್ಬ ಬಂದಿದ್ದರಿಂದ ಹಿಂದುಗಳು ಮುಸ್ಲಿಮರಿಗೆ ಬಣ್ಣ ಹಾಕದಿರಲಿ. ನಾವು ಕೂಡ ಸಹಕರಿಸುತ್ತೇವೆ. ಈ ವರ್ಷ ಆದಷ್ಟು ಬೇಗ ಪ್ರಾರ್ಥನೆ ಮುಗಿಸುವ ಕುರಿತು ಸಮುದಾಯದವರೊಡನೆ ಚರ್ಚಿಸಲಾಗುವುದು ಎಂದರು.
ಪಿಎಸ್ಐ ಮುದ್ದುರಂಗಯ್ಯ ಮಾತನಾಡಿ, ಪಟ್ಟಣದ ಪ್ರಮುಖ ವೃತ್ತದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದರು. ಪ್ರಮುಖರಾದ ಬಸನಗೌಡ ಪೊಲೀಸ್ ಪಾಟೀಲ್, ಸಿ.ದಾನಪ್ಪ ಮಾತನಾಡಿದರು.