ಮಸ್ಕಿ: ತುಂಗಭದ್ರಾ ಎಡದಂಡೆ ಕಾಲುವೆಯ 55ನೇ ಉಪ ನಾಲೆಯ ಗೇಜ್ ಅನ್ನು ಶಾಸಕ ಆರ್.ಬಸನಗೌಡ ತುರ್ವಿಹಾಳ ಭಾನುವಾರ ಪರಿಶೀಲಿಸಿದರು.
ಉಪ ಕಾಲುವೆ ವ್ಯಾಪ್ತಿಯ ಗೌಡನಬಾವಿ, ಜಾಲವಾಡಗಿ ಸೇರಿ ನಾಲೆ ಕೊನೆಯ ಭಾಗದ ಜಮೀನುಗಳಿಗೆ ನೀರು ಮುಟ್ಟದ ಕಾರಣ ಭತ್ತದ ಬೆಳೆ ಒಣಗುವ ಹಂತಕ್ಕೆ ಬಂದಿದೆ. ಜಮೀನಿಗೆ ನೀರು ತಲುಪಿಸಲು ಕ್ರಮ ಕೈಗೊಳ್ಳಿ ಎಂದು ರೈತರು ಒತ್ತಾಯಿಸಿದರು. ನೀರಿನ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಸರದಿ ಪ್ರಕಾರ ನಿಮ್ಮ ಭಾಗಕ್ಕೆ ನೀರು ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ತಹಸೀಲ್ದಾರ್ ಗಸ್ತು: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಿಂದ ಮಾನ್ವಿ, ಸಿರವಾರ ಹಾಗೂ ರಾಯಚೂರು ಭಾಗಕ್ಕೆ ನೀರು ತಲುಪದ ಕಾರಣ ತಹಸೀಲ್ದಾರ್ ಕವಿತಾ ಆರ್., ಕಂದಾಯ ಇಲಾಖೆ ಹಾಗೂ ನೀರಾವರಿ ನಿಗಮದ ಅಧಿಕಾರಿಗಳು ಕಾಲುವೆ ಮೇಲೆ ಗಸ್ತು ತಿರುಗುತ್ತಿದ್ದಾರೆ. ಜಿಲ್ಲಾಡಳಿತದ ಸೂಚನೆ ಮೇರೆಗೆ ಮೈಲ್ 47 ಹಾಗೂ 69 ರಲ್ಲಿ ನಿಗದಿತ ಪ್ರಮಣದಲ್ಲಿ ನೀರು ಹರಿಯುವಂತೆ ಮಾಡಿ ಕೊನೆ ಭಾಗದ ರೈತರಿಗೆ ನೀರು ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಕವಿತಾ ತಿಳಿಸಿದ್ದಾರೆ.