

ನಾರ್ತ್ಸೌಂಡ್: ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ನಲ್ಲಿ ಸದ್ಯ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದು, ತನ್ನ ಮುಂದಿನೆರಡು ಪಂದ್ಯ ಜಯಿಸುವ ಜತೆಗೆ ಸ್ಕಾಟ್ಲೆಂಡ್ ತಂಡವನ್ನು ರನ್ರೇಟ್ನಲ್ಲೂ ಹಿಂದಿಕ್ಕುವುದು ಅಗತ್ಯವಾಗಿದೆ. ಆದರೆ, ಸ್ಕಾಟ್ಲೆಂಡ್ ತಂಡ ತನ್ನ ಅಂತಿಮ ಪಂದ್ಯದಲ್ಲಿ ಆಂಗ್ಲರ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೆಲಿಯಾವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆಸೀಸ್ ಉದ್ದೇಶಪೂರ್ವಕವಾಗಿ ಸೋತು ಅಥವಾ ಸ್ಕಾಟ್ಲೆಂಡ್ಗೆ ಉತ್ತಮ ರನ್ರೇಟ್ ಕಾಯ್ದುಕೊಳ್ಳಲು ನೆರವಾಗಿ ಆಂಗ್ಲರನ್ನು ಹೊರದಬ್ಬಲು ಪ್ರಯತ್ನಿಸುವ ಭೀತಿ ಇದೆ. ಒಂದು ವೇಳೆ ಆಸೀಸ್ ತಂಡ ಈ ಕುತಂತ್ರ ಅನುಸರಿಸಿದರೆ, ನಾಯಕ ಮಿಚೆಲ್ ಮಾರ್ಷ್ ಐಸಿಸಿಯಿಂದ 2 ಪಂದ್ಯ ನಿಷೇಧಕ್ಕೆ ಒಳಗಾಗುವ ಭೀತಿಯೂ ಇದೆ ಎನ್ನಲಾಗಿದೆ.
ಇಂಗ್ಲೆಂಡ್ ತಂಡವನ್ನು ಟೂರ್ನಿಯಿಂದ ಹೊರದಬ್ಬಲು ನಾವು ಇಷ್ಟಪಡುತ್ತೇವೆ. ಆದರೆ ಗೆಲುವು ಸಾಧಿಸುವುದು ಕೂಡ ನಮ್ಮ ಮುಖ್ಯ ಗುರಿಯಾಗಿರುತ್ತದೆ. ಯಾರನ್ನೋ ಟೂರ್ನಿಯಿಂದ ಹೊರದಬ್ಬುವ ಸಲುವಾಗಿ ಸೋಲಲು ಇಷ್ಟಪಡುವುದಿಲ್ಲ ಎಂದು ಆಸೀಸ್ ವೇಗಿ ಜೋಶ್ ಹ್ಯಾಸಲ್ವುಡ್ ಬುಧವಾರ ತಿಳಿಸಿದ್ದಾರೆ. ಈ ನಡುವೆ ಆಸೀಸ್ ಮಾಜಿ ನಾಯಕ ಟಿಮ್ ಪೇನ್, ಇಂಗ್ಲೆಂಡ್ ತಂಡವನ್ನು ಟಿ20 ವಿಶ್ವಕಪ್ನಿಂದ ಹೊರದಬ್ಬುವಂಥ ಲಿತಾಂಶವನ್ನು ಸಾಧಿಸಲು ಮಿಚೆಲ್ ಮಾರ್ಷ್ ಬಳಗ ಪ್ರಯತ್ನಿಸಬೇಕೆಂದು ಹೇಳಿದ್ದಾರೆ.
ಇಂಗ್ಲೆಂಡ್ ತಂಡ ಗುರುವಾರ ಓಮನ್ ಮತ್ತು ಶನಿವಾರ ನಮೀಬಿಯಾ ವಿರುದ್ಧ ಆಡಲಿದೆ. ಇವೆರಡು ಪಂದ್ಯಗಳ ನಂತರ ಆಸೀಸ್ ಭಾನುವಾರ ಸ್ಕಾಟ್ಲೆಂಡ್ ವಿರುದ್ಧ ಕೊನೇ ಲೀಗ್ ಪಂದ್ಯ ಆಡಲಿದೆ. ಸದ್ಯ ಸ್ಕಾಟ್ಲೆಂಡ್ (+2.164) ರನ್ರೇಟ್ ಇಂಗ್ಲೆಂಡ್ಗಿಂತ (&1.800) ಉತ್ತಮವಾಗಿದೆ. ಇಂಗ್ಲೆಂಡ್ ಮುಂದಿನೆರಡು ಪಂದ್ಯ ಗೆದ್ದು ರನ್ರೇಟ್ ಸುಧಾರಿಸಿಕೊಂಡರೂ, ಸ್ಕಾಟ್ಲೆಂಡ್ಗೆ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಮತ್ತೆ ರನ್ರೇಟ್ ಸುಧಾರಿಸಿಕೊಳ್ಳುವ ಅವಕಾಶವಿದೆ. ಅದಕ್ಕೆ ಆಸೀಸ್ ನೆರವಾಗುವುದೇ ಅಥವಾ ತನ್ನ ನೈಜ ಆಟವಾಡುವುದೇ ಎಂಬುದು ಈಗಿರುವ ಕುತೂಹಲವಾಗಿದೆ.