ಪತ್ನಿ ಬಿಟ್ಟು ಹೋದ ಕೋಪದಲ್ಲಿ ಮದುವೆ ಬ್ರೋಕರ್‌ನ ಕೊಲೆ

mng--23 may Sulaiman
Published on

ಮಂಗಳೂರು: ಪತಿ-ಪತ್ನಿಯ ನಡುವೆ ಹೊಂದಾಣಿಕೆಯಾಗದೆ ಪತ್ನಿ ಪತಿಯನ್ನು ಬಿಟ್ಟು ತವರು ಮನೆ ಸೇರಿದ್ದು, ಈ ದ್ವೇಷದಲ್ಲಿ ಮದುವೆ ಮಾಡಿಸಿದ್ದ ಬ್ರೋಕರ್‌ನನ್ನೇ ಗುರುವಾರ ರಾತ್ರಿ ನಗರದ ಹೊರ ವಲಯದ ವಳಚ್ಚಿಲ್ ಪದವು ಎಂಬಲ್ಲಿ ಕಡಿದು ಕೊಲೆ ಮಾಡಲಾಗಿದೆ.

ವಾಮಂಜೂರು ಪಿಲಿಕುಳ ಬಳಿಯ ನಿವಾಸಿ ಸುಲೇಮಾನ್ (50) ಕೊಲೆಯಾದವರು. ತಡೆಯಲು ಬಂದ ಇವರ ಇಬ್ಬರು ಮಕ್ಕಳಾದ ಸಿಯಾಬ್ ಮತ್ತು ರಿಯಾಬ್ ಅವರಿಗೂ ಮಾರಣಾಂತಿಕ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ವಳಚ್ಚಿಲ್ ನಿವಾಸಿ ಮುಸ್ತಫಾ (30) ಎಂಬಾತನನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ಸುಲೇಮಾನ್ ಮದುವೆ ಬ್ರೋಕರ್ ಕೆಲಸ ಮಾಡುತ್ತಿದ್ದರು. ಇವರು ಸಂಬಂಧಿಯೂ ಆಗಿರುವ ಮುಸ್ತಫಾನಿಗೆ ಎಂಟು ತಿಂಗಳ ಹಿಂದೆ ಅಡ್ಡೂರಿನ ಶೈನಾಝ್ ಎನ್ನುವ ಯುವತಿಯೊಂದಿಗೆ ಮದುವೆ ಮಾಡಿಸಿದ್ದರು. ಮದುವೆ ನಂತರ ಇವರ ನಡುವೆ ಹೊಂದಾಣಿಕೆಯಾಗದೆ ಕೌಟುಂಬಿಕ ಜಗಳ ಆರಂಭವಾಗಿತ್ತು. ಎರಡು ತಿಂಗಳ ಹಿಂದೆ ಮುಸ್ತಫಾನ ಪತ್ನಿ ಗಂಡನನ್ನು ಬಿಟ್ಟು ತವರು ಮನೆ ಸೇರಿದ್ದರು. ಇದರ ಕೋಪದಲ್ಲಿ ಮುಸ್ತಫಾ ಹಾಗೂ ಸುಲೇಮಾನ್ ನಡುವೆ ಜಗಳ ನಡೆದಿತ್ತು.

ಆರೋಪಿ ಮುಸ್ತಫಾ ಗುರುವಾರ ರಾತ್ರಿ ಸುಲೇಮಾನ್‌ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದರಿಂದ ಬೇಸರಗೊಂಡ ಸುಲೇಮಾನ್ ಅವರು ಮಾತುಕತೆಗೆಂದು ತನ್ನ ಇಬ್ಬರು ಮಕ್ಕಳು ಹಾಗೂ ಇನ್ನೋರ್ವ ಸಂಬಂಧಿ ಜತೆ ಮುಸ್ತಫಾನ ಮನೆಗೆ ಹೋಗಿದ್ದರು. ಮೂವರನ್ನು ಮನೆಯ ಹೊರಗೆ ನಿಲ್ಲಿಸಿ, ಮನೆಯೊಳಗೆ ತೆರಳಿ ಮಾತುಕತೆ ನಡೆಸಿದ್ದಾರೆ. ಈ ನಡುವೆ ಎದ್ದು ಬಂದ ಸುಲೇಮಾನ್ ಅವರು, ಮಾತುಕತೆ ವಿಫಲವಾಯಿತು. ನಾವು ಮನೆಗೆ ಹೋಗೋಣ ಎಂದು ಹೇಳುತ್ತಾ ವೇಗವಾಗಿ ಹಿಂದಕ್ಕೆ ಬರುತ್ತಿದ್ದಾಗಲೇ ತಲವಾರು ಹಿಡಿದು ಅಟ್ಟಿಸಿಕೊಂಡು ಬಂದ ಮುಸ್ತಫಾ ಬ್ಯಾರಿ ಭಾಷೆಯಲ್ಲಿ ಬೆದರಿಕೆಯೊಡ್ಡಿ, ನೇರವಾಗಿ ಸುಲೇಮಾನ್ ಅವರ ಕುತ್ತಿಗೆಗೆ ಕಡಿದಿದ್ದಾನೆ. ಗಂಭೀರ ಗಾಯಗೊಂಡು ಸುಲೇಮಾನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಈ ಸಂದರ್ಭ ತಡೆಯಲು ಬಂದ ಅವರ ಪುತ್ರರ ಮೇಲೂ ಚೂರಿಯಿಂದ ಇರಿದಿದ್ದು, ಸಿಯಾಬ್‌ಗೆ ಎದೆಯ ಎಡಭಾಗಕ್ಕೆ ಮತ್ತು ರಿಯಾಬ್‌ಗೆ ಬಲ ತೋಳಿಗೆ ಇರಿದು ಅವರನ್ನೂ ಕೊಲೆ ಮಾಡಲು ಯತ್ನಿಸಿದ್ದಾನೆ.

ಸ್ಥಳೀಯರ ಸಹಕಾರದಿಂದ ಮೂವರನ್ನೂ ಪಡೀಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುಲೈಮಾನ್ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಪುತ್ರರಿಗೆ ಚಿಕಿತ್ಸೆ ಮುಂದುವರಿದಿದೆ.

ಘಟನೆಯ ಬಳಿಕ ಆರೋಪಿ ಮುಸ್ತಾ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net