

ಬೆಂಗಳೂರು: ಅಮೆರಿಕದ ಮಾಜಿ ಅಧ್ಯಕ್ಷ, 74 ವರ್ಷದ ಬಿಲ್ ಕ್ಲಿಂಟನ್ ಇದೀಗ ಈ ವಯಸ್ಸಲ್ಲಿ ವಧುವಿನ ಕುರಿತು ಮಾತನಾಡಿದ್ದಾರೆ. ಮಾತ್ರವಲ್ಲ, 'ವಧು ಇನ್ನೂ ಚೆನ್ನಾಗಿದ್ದಾಳೆ, ಐ ಲವ್ ಯೂ' ಎಂದು ಕೂಡ ಹೇಳಿದ್ದಾರೆ!
ಹಾಗಂತ ಬಿಲ್ ಕ್ಲಿಂಟನ್ ಈಗ್ಯಾಕೆ ಹೀಗಂದ್ರು ಅಂತ ಯಾರೂ ಹುಬ್ಬೇರಿಸಬೇಕಿಲ್ಲ. ಏಕೆಂದರೆ ಅವರು ಹೀಗೆ ಹೇಳಿದ್ದು ಅವರ ಪತ್ನಿ ಹಿಲರಿ ಕ್ಲಿಂಟನ್ ಕುರಿತು. ಇಂದು ಅವರು ಹೀಗೆ ಹೇಳಲು ಕಾರಣ ಅವರ ವಿವಾಹ ವಾರ್ಷಿಕೋತ್ಸವ. ಬಿಲ್ ಹಾಗೂ ಹಿಲರಿ ಮದುವೆಯಾಗಿ ಇದೀಗ ನಾಲ್ಕೂವರೆ ದಶಕಗಳನ್ನು ಪೂರೈಸಿದ್ದಾರೆ.
ತಮ್ಮ ವೈವಾಹಿಕ ಜೀವನದ ಖುಷಿ, ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನು ಬಿಲ್ ಕ್ಲಿಂಟನ್ ಈ ರೀತಿ ವ್ಯಕ್ತಪಡಿಸಿದ್ದಾರೆ. 'ಅಕ್ಟೋಬರ್ 11, ನಲವತ್ತೈದು ವರ್ಷಗಳ ಹಿಂದಿನ ಒಂದು ಸುಂದರ ದಿನ, ಈಗ ಕೂಡ. ವಧು ಕೂಡ ಸುಂದರಿಯಾಗಿದ್ದಳು, ಈಗ ಸಹ. ಹ್ಯಾಪಿ ಆ್ಯನಿವರ್ಸರಿ ಹಿಲರಿ, ಐ ಲವ್ ಯೂ' ಎಂದು ಬಿಲ್ ಕ್ಲಿಂಟನ್ ಹೇಳಿಕೊಂಡಿದ್ದಾರೆ. ಪತಿಯ ಟ್ವೀಟ್ಗೆ ಅಷ್ಟೇ ಪ್ರೀತಿಯಿಂದ ಪ್ರತಿಕ್ರಿಯಿಸಿರುವ ಹಿಲರಿ ಕ್ಲಿಂಟನ್, 'ದ ಗ್ರೂಮ್ ಸ್ಟಿಲ್ ಕ್ಲೀನ್ಸ್ ಅಪ್ ಪ್ರೆಟ್ಟಿ ವೆಲ್, ಟೂ. ಲವ್ ಯೂ, ಬಿಲ್..' ಎಂದಿದ್ದಾರೆ.