

ಮೆಲ್ಬೋರ್ನ್: ಪ್ರವಾಸಿ ಭಾರತ ಮತ್ತು ಆಸ್ಟ್ರೆಲಿಯಾ ತಂಡಗಳ ನಡುವಿನ ಪ್ರತಿಷ್ಠಿತ ಬಾರ್ಡರ್-ಗಾವಸ್ಕರ್ ಟ್ರೋಫಿಗೆ ನವೆಂಬರ್ 22ರಂದು ಪರ್ತ್ನ ಆಪ್ಟಸ್ ಸ್ಟೇಡಿಯಂನಲ್ಲಿ ಚಾಲನೆ ಸಿಗಲಿದೆ. ಐದು ಪಂದ್ಯಗಳ ಸರಣಿಯಲ್ಲಿ ಡಿಸೆಂಬರ್ 6ರಿಂದ ಅಡಿಲೇಡ್ನಲ್ಲಿ ನಡೆಯಲಿರುವ 2ನೇ ಟೆಸ್ಟ್ ಅಡಿಲೇಡ್ನಲ್ಲಿ ನಿಗದಿಯಾಗಿದೆ. ಕ್ರಿಕೆಟ್ ಆಸ್ಟ್ರೆಲಿಯಾ ಮಂಗಳವಾರ 2024-25ರ ಸಾಲಿನ ತವರಿನ ಸರಣಿಗಳ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಡಿಸೆಂಬರ್ 14ರಿಂದ ಸರಣಿಯ 3ನೇ ಟೆಸ್ಟ್ ಬ್ರಿಸ್ಬೇನ್ನಲ್ಲಿ ನಡೆಯಲಿದ್ದರೆ, ಕೊನೇ 2 ಟೆಸ್ಟ್ ಪಂದ್ಯಗಳು ಸಾಂಪ್ರದಾಯಿಕ ಬಾಕ್ಸಿಂಗ್ ಡೇ ಟೆಸ್ಟ್ (ಮೆಲ್ಬೋರ್ನ್) ಮತ್ತು ನ್ಯೂ ಇಯರ್ ಟೆಸ್ಟ್ (ಸಿಡ್ನಿ) ಪಂದ್ಯಗಳಾಗಿರಲಿವೆ. ಸರಣಿಯ ಮೊದಲ 2 ಪಂದ್ಯಗಳ ನಡುವೆ 9 ದಿನಗಳ ಅಂತರವಿದೆ. ಪಿಂಕ್ಬಾಲ್ನಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ನಡೆಸಲು ಆಟಗಾರರಿಗೆ ಹೆಚ್ಚಿನ ಸಮಯ ನೀಡುವುದು ಇದರ ಹಿಂದಿನ ಉದ್ದೇಶವಾಗಿದೆ. 2020-21ರ ಆಸೀಸ್ ಪ್ರವಾಸದಲ್ಲಿ ಅಡಿಲೇಡ್ನಲ್ಲೇ ನಡೆದ ಅಹರ್ನಿಶಿ ಟೆಸ್ಟ್ನಲ್ಲಿ ಕೇವಲ 36 ರನ್ಗೆ ಆಲೌಟ್ ಆಗಿ ಸೋತಿದ್ದ ಭಾರತ, ನಂತರ ತಿರುಗೇಟು ನೀಡಿ ಸರಣಿ ಜಯಿಸಿತ್ತು.
ಸಾಮಾನ್ಯವಾಗಿ ಭಾರತ ತಂಡ ಆಸೀಸ್ ಪ್ರವಾಸದಲ್ಲಿ ಬ್ರಿಸ್ಬೇನ್ನಲ್ಲೇ ಸರಣಿಯ ಮೊದಲ ಟೆಸ್ಟ್ ಆಡುತಿತ್ತು. ಆದರೆ ಈ ಬಾರಿ ಉಭಯ ದೇಶಗಳ ವೀಕ್ಷಕರಿಗೂ ಅನುಕೂಲಕರ ಎನಿಸುವ ಸಮಯ ವಲಯದ ಕಾರಣಕ್ಕಾಗಿ ಪರ್ತ್ಗೆ ಮೊದಲ ಟೆಸ್ಟ್ ಆತಿಥ್ಯ ವಹಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೆಲಿಯಾದ ಮುಖ್ಯಸ್ಥ ಪೀಟರ್ ರೋಚ್ ಸ್ಪಷ್ಟಪಡಿಸಿದ್ದಾರೆ.
ಬ್ರಿಸ್ಬೇನ್ ಬೌನ್ಸಿ ಪಿಚ್ ಹೊಂದಿರುವ ಕಾರಣಕ್ಕೆ ಆಸೀಸ್ ಯಾವಾಗಲೂ ಪ್ರವಾಸಿ ಭಾರತ ತಂಡಕ್ಕೆ ಮೊದಲ ಪಂದ್ಯದಲ್ಲೇ ಕಠಿಣ ವಾತಾವರಣ ನಿರ್ಮಿಸುತ್ತಿತ್ತು. ಆದರೆ ಪರ್ತ್ ಕೂಡ ಬೌನ್ಸಿ ಮತ್ತು ಆಸೀಸ್ ನೆಲದ ಕಠಿಣ ಪಿಚ್ ಒಳಗೊಂಡಿದೆ. ಹೀಗಾಗಿ ಈ ಬಾರಿ ಮೊದಲೆರಡೂ ಪಂದ್ಯಗಳಲ್ಲಿ ಆತಿಥೇಯರಿಗೆ ಹೆಚ್ಚು ಲಾಭ ಸಿಗಲಿದೆ ಎಂದೂ ರೋಚ್ ವಿವರಿಸಿದ್ದಾರೆ. ಪರ್ತ್ನ ಹೊಸ ಸ್ಟೇಡಿಯಂನಲ್ಲಿ ಆಸೀಸ್ ಇದುವರೆಗೆ ಆಡಿರುವ 4 ಟೆಸ್ಟ್ಗಳಲ್ಲೂ ಗೆದ್ದ ಅಜೇಯ ದಾಖಲೆ ಹೊಂದಿದೆ.
1991-92ರ ಬಳಿಕ ಮೊದಲ ಬಾರಿಗೆ ಭಾರತ-ಆಸೀಸ್ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಿಗದಿಯಾಗಿದೆ. ಉಭಯ ತಂಡಗಳ ಕೊನೇ 4 ಸರಣಿಗಳಲ್ಲಿ ಭಾರತವೇ ಜಯಿಸಿದೆ. ಇದರಲ್ಲಿ ಆಸೀಸ್ ನೆಲದ ಕೊನೇ 2 ಸರಣಿಗಳೂ ಸೇರಿವೆ. 2024-25ರ ಸಾಲಿನ ಆಸೀಸ್ ತವರಿನ ಅಂತಾರಾಷ್ಟ್ರೀಯ ಕ್ರಿಕೆಟ್ ಋತು ನವೆಂಬರ್ 4ರಂದು ಶುರುವಾಗಲಿದೆ. ಮೊದಲಿಗೆ ಪಾಕಿಸ್ತಾನ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ನಡೆದರೆ, ನಂತರ ನವೆಂಬರ್ 14ರಿಂದ ಪಾಕ್ ವಿರುದ್ಧವೇ ಮತ್ತೆ 3 ಟಿ20 ಪಂದ್ಯಗಳು ನಡೆಯಲಿವೆ.
ಟೆಸ್ಟ್ ಸರಣಿ ವೇಳಾಪಟ್ಟಿ
ಪಂದ್ಯ ದಿನಾಂಕ ಸ್ಥಳ
1. ನ. 22-26 ಪರ್ತ್
2. ಡಿ.6-10 ಅಡಿಲೇಡ್*
3. ಡಿ. 14-18 ಬ್ರಿಸ್ಬೇನ್
4. ಡಿ. 26-30 ಮೆಲ್ಬೋರ್ನ್
5. ಜ.3-7 ಸಿಡ್ನಿ
*ಅಹರ್ನಿಶಿ
ಭಾರತದ ಮಹಿಳೆಯರಿಗೆ ಆಸೀಸ್ನಲ್ಲಿ ಏಕದಿನ ಸರಣಿ
ಪುರುಷರ ತಂಡದ ಪ್ರವಾಸದ ಸಮಯದಲ್ಲೇ ಭಾರತದ ಮಹಿಳಾ ತಂಡವೂ ಆಸೀಸ್ಗೆ ತೆರಳಲಿದ್ದು, ಡಿಸೆಂಬರ್ 5, 8, 11ರಂದು 3 ಏಕದಿನ ಪಂದ್ಯಗಳ ಸರಣಿ ಆಡಲಿದೆ. ಆಸೀಸ್ ಮಹಿಳೆಯರ 2024-25ರ ತವರಿನ ಸರಣಿಯ ವೇಳಾಪಟ್ಟಿಯಲ್ಲಿ ಪ್ರಕಟಿಸಲಾಗಿದ್ದು, 1949ರ ಬಳಿಕ ಮೊದಲ ಬಾರಿಗೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಮಹಿಳೆಯರ ಟೆಸ್ಟ್ ನಿಗದಿಯಾಗಿದೆ. ಮಹಿಳಾ ಆಶಸ್ನ 90ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಈ ಪಂದ್ಯ ಜನವರಿ 30ರಿಂದ ಅಹರ್ನಿಶಿಯಾಗಿ ನಡೆಯಲಿದೆ.