ಬೀದಿ ಬದಿ ವ್ಯಾಪಾರಕ್ಕಾಗಿ ರಸ್ತೆ ಗುರುತಿಸಿ: ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಸೂಚನೆ

commsr meeting
Published on

ಬೆಂಗಳೂರು: ಪಾಲಿಕೆಯ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವ ರಸ್ತೆಗಳನ್ನು ಮಾರ್ಗಸೂಚಿಯ ಅನುಸಾರ ಗುರುತಿಸುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಲ್ಲೇಶ್ವರದಲ್ಲಿರುವ ಪಶ್ಚಿಮ ವಲಯ ಕಚೇರಿಯಲ್ಲಿ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆಗೆ’ ಕಾರ್ಯಕ್ರಮದಲ್ಲಿ ಶುಕ್ರವಾರ ನಾಗರಿಕರಿಂದ ಅಹವಾಲು ಸ್ವೀಕರಿಸಿದ ವೇಳೆ ಅವರು ಈ ಸೂಚನೆ ನೀಡಿದರು. ಬೀದಿ ಬದಿ ವ್ಯಾಪಾರಿಗಳು, ವ್ಯಾಪಾರ ವಲಯವನ್ನು ಗುರುತಿಸುವವರೆಗೆ ಯಾವುದೇ ರೀತಿಯ ಸಮಸ್ಯೆ ಮಾಡದಂತೆ ಮನವಿ ಮಾಡಿದರು.

ಪಶ್ಚಿಮ ವಲಯದಲ್ಲಿ ಈಗಾಗಲೇ 7,000 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಪಾಲಿಕೆ ವತಿಯಿಂದ ವೆಂಡಿಂಗ್ ಜೋನ್‌ಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಇವುಗಳನ್ನು ಗುರುತಿಸುವವರೆಗೆ ಯಾವ ಯಾವ ರಸ್ತೆಗಳಲ್ಲಿ ವಹಿವಾಟು ಮಾಡಬಹುದು ಎಂಬುದನ್ನು ಪರಿಶೀಲಿಸಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಶಾಶ್ವತ ಪೆಟ್ಟಿಗೆಗಳನ್ನು ತೆರವುಗೊಳಿಸಿ:

ಪಾದಚಾರಿ ಮಾರ್ಗದಲ್ಲಿ ಶಾಶ್ವತ ಪೆಟ್ಟಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರೆ ಅದನ್ನು ಕೂಡಲೆ ತೆರವುಗೊಳಿಸಬೇಕು. ಪಾದಚಾರಿಗಳ ಓಡಾಟಕ್ಕೆ ಅವಕಾಶವಿರಬೇಕು. ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವಂತಿಲ್ಲ. ಇದರ ಜೊತೆಗೆ ಪಾದಚಾರಿ ಮಾರ್ಗದಲ್ಲಿ ಬರುವ ಅಂಗಡಿ/ಮುಂಗಟ್ಟುಗಳ ಮುಂಭಾಗದ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವುದನ್ನು ಪರಿಶೀಲಿಸಿ ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

90ಕ್ಕೂ ಹೆಚ್ಚು ಅಹವಾಲು ಸ್ವೀಕಾರ:

ಕಾರ್ಯಕ್ರಮದಲ್ಲಿ ನಾಗರಿಕರಿಂದ 90ಕ್ಕೂ ಹೆಚ್ಚು ಅಹವಾಲನ್ನು ಸ್ವೀಕರಿಸಲಾಯಿತು. ಈ ದೂರುಗಳನ್ನು ತ್ವರಿತವಾಗಿ ಬಗೆಹರಿಸಿ ಸಂಬಂಧಿಸಿದ ಜನರಿಗೆ ಮಾಹಿತಿ ಒದಗಿಸಬೇಕು ಎಂದು ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ವಲಯ ಆಯುಕ್ತೆ ಅರ್ಚನಾ, ಜಂಟಿ ಆಯುಕ್ತ ಸಂಗಪ್ಪ, ಉಪ ಆಯುಕ್ತ ಶ್ರೀನಿವಾಸ್, ಮುಖ್ಯ ಅಭಿಯಂತರ ಶಶಿಕುಮಾರ್, ಕಾರ್ಯಪಾಲಕ ಅಭಿಯಂತರರು ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ವಿದ್ಯುತ್ ಚಿತಾಗಾರಕ್ಕೆ ಪ್ರಸ್ತಾವನೆ ಸಲ್ಲಿಸಿ:

ಚಾಮರಾಜಪೇಟೆಯ ಟಿ.ಆರ್.ಮಿಲ್ ಬಳಿಯ ರುದ್ರಭೂಮಿ ಸುಮಾರು 3 ಎಕರೆ ಪ್ರದೇಶದಲ್ಲಿದ್ದು, ವಿದ್ಯತ್ ಚಿತಾಗಾರ ನಿರ್ಮಿಸಿದರೆ ಸ್ಥಳೀಯರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ನಾಗರಿಕರು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು ವಿದ್ಯತ್ ಚಿತಾಗಾರ ಸ್ಥಾಪಿಸಲು ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net