ಸಾಗರೋತ್ಪನ್ನಗಳ ರಫ್ತಿನಲ್ಲಿ ಸಾರ್ವಕಾಲಿಕ ಉತ್ತುಂಗಕ್ಕೆ ತಲುಪಿದ ಭಾರತ

20180801-190952-1000x1000
Published on



ಮಂಗಳೂರು : ಪ್ರಮುಖ ರಫ್ತು ಮಾರುಕಟ್ಟೆಗಳಲ್ಲಿ ವಿವಿಧ ಸವಾಲುಗಳ ನಡುವೆಯೂ 2023-24ರ ಆರ್ಥಿಕ ವರ್ಷದಲ್ಲಿ
ಭಾರತವು 60,523.89 ಕೋಟಿ ರೂ. ಮೌಲ್ಯದ 17,81,602 ಮೆಟ್ರಿಕ್ ಟನ್ ಸಾಗರೋತ್ಪನ್ನಗಳನ್ನು ರಫ್ತು ಮಾಡಿ ಸಾರ್ವಕಾಲಿಕ ವೃದ್ಧಿ ದಾಖಲಿಸಿದೆ.
ಶೀತಲೀಕರಿಸಿದ ಸಿಗಡಿಗಳು ಪ್ರಮಾಣದಲ್ಲಿ ಮತ್ತು ಮೌಲ್ಯದಲ್ಲಿ ಪ್ರಮುಖ ರಫ್ತು ಉತ್ಪನ್ನವಾಗಿ ಮುಂದುವರಿದಿದೆ. ಯುಎಸ್‌ಎ ಮತ್ತು ಚೀನಾ ದೇಶಗಳು ಭಾರತದ ಸಾಗರೋತ್ಪನ್ನಗಳ ಪ್ರಮುಖ ಆಮದುದಾರರಾಗಿ ಹೊರಹೊಮ್ಮಿವೆ. 2023-24ನೇ ಸಾಲಿನಲ್ಲಿ
ಭಾರತದ ರಫ್ತು ಪ್ರಮಾಣ ಶೇ.2.67 ರಷ್ಟು ವೃದ್ಧಿಸಿದೆ. 2022-23ನೇ ಸಾಲಿನಲ್ಲಿ ಭಾರತವು 63,969.14 ಕೋಟಿ ರೂ. 8,094.31 ಮಿಲಿಯನ್ ಡಾಲರ್ ಮೌಲ್ಯದ 17,35,286 ಮೆಟ್ರಿಕ್ ಟನ್ ಸಾಗರೋತ್ಪನ್ನಗಳನ್ನು ರಫ್ತು ಮಾಡಿತ್ತು ಎಂದು ಕೊಚ್ಚಿನ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಾಗರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ.ವಿ. ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತವು 40013.54 ಕೋಟಿ ರೂ. (4881.27 ಮಿಲಿಯನ್ ಡಾಲರ್) ವಿದೇಶಿ ವಿನಿಮಯಗಳಿಸಿ ಶೀತಲೀಕರಿಸಿದ ಸಿಗಡಿ ರಫ್ತು ವಹಿವಾಟಿನಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. ರಫ್ತು ಪ್ರಮಾಣದಲ್ಲಿ ಶೇ.40.19 ಮತ್ತು ಒಟ್ಟು ಡಾಲರ್ ಗಳಿಕೆಯಲ್ಲಿ ಶೇ.66.12 ಪಾಲು ಹೊಂದಿದ್ದು, 2023-24ರಲ್ಲಿ ಸಿಗಡಿ ರಫ್ತು ಪ್ರಮಾಣವು ಶೇ.0.69 ಹೆಚ್ಚಾಗಿದೆ. 2023-24ನೇ ಸಾಲಿನಲ್ಲಿ ಶೀತಲೀಕರಿಸಿದ ಸಿಗಡಿ ಉತ್ಪನ್ನಗಳ ಒಟ್ಟು ರಫ್ತು 7,16,004 ಮೆಟ್ರಿಕ್ ಟನ್ ಆಗಿತ್ತು. ಭಾರತದ ಸಿಗಡಿಗಳಿಗೆ ಅತೀ ದೊಡ್ಡ ಮಾರುಕಟ್ಟೆೆಯಾಗಿರುವ ಯುಎಸ್‌ಎ 2,97,5171 ಮೆಟ್ರಿಕ್ ಟನ್ ಶೀತಲೀಕರಿಸಿದ ಸಿಗಡಿ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ನಂತರದ ಸ್ಥಾನಗಳಲ್ಲಿರುವ ಚೀನಾ 1,48,483 ಮೆಟ್ರಿಕ್ ಟನ್ ಆಮದು ಮಾಡಿಕೊಂಡಿವೆ.
ಶೀತಲೀಕರಿಸಿದ ಮೀನುಗಳ ರಫ್ತಿನಲ್ಲಿ ಭಾರತವು 5,509.69 ಕೋಟಿ ರೂ., ಫಿಶ್ ಮೀಲ್ ಫೀಡ್ ಮತ್ತು ಒಣಗಿಸಿದ ಉತ್ಪನ್ನಗಳ ರಫ್ತು ವಹಿವಾಟಿನಲ್ಲಿ 3684.79 ಕೋಟಿ ರೂ. ಹಾಗೂ ಶೀತಲೀಕರಿಸಿದ ಬೊಂಡಾಸ್‌ನಿಂದ 3061.46 ಕೋಟಿ ರೂ.ವಿದೇಶಿ ವಿನಿಮಯ ಗಳಿಸಿದೆ ಎಂದು ಸಾಗರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net