ವಲಸೆ ಕಾರ್ಮಿಕರಿಗೆ ಬಸ್​ ಕಳಿಸಿದ್ದೇವೆಂದ ಪ್ರಿಯಾಂಕಾ; ನೋಂದಣಿ ಸಂಖ್ಯೆ ಪರಿಶೀಲಿಸಿದಾಗ ಬಯಲಾಯ್ತು ಅಸಲಿಯತ್ತು

Priyanka Gandhi
Published on

ನವದೆಹಲಿ: ಲಾಕ್​ಡೌನ್​ ಸತತವಾಗಿ ಮುಂದುವರಿಯುತ್ತಿರುವ ಕಾರಣ ತೀವ್ರ ಕಷ್ಟಕ್ಕೆ ಒಳಗಾಗಿರುವ ಅದೆಷ್ಟೋ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ದೌಡಾಯಿಸುತ್ತಿದ್ದಾರೆ. ಅನೇಕರು ಊರಿಗೆ ಹೋಗಲು ವಾಹನಗಳ ವ್ಯವಸ್ಥೆ ಇಲ್ಲದೆ ನಡೆದುಕೊಂಡೇ ಹೋಗುತ್ತಿದ್ದಾರೆ. ವಲಸೆ ಕಾರ್ಮಿಕರು ಅವರ ಊರನ್ನು ತಲುಪಲು ಕೇಂದ್ರ ಸರ್ಕಾರ ಶ್ರಮಿಕ್​ ರೈಲು ವ್ಯವಸ್ಥೆಯನ್ನು ಮಾಡಿದ್ದರೂ ಅದು ಎಲ್ಲರಿಗೂ ತಲುಪುವಲ್ಲಿ ವಿಳಂಬವಾಗುತ್ತಿದೆ.

ಈ ಮಧ್ಯ ವಲಸೆ ಕಾರ್ಮಿಕರನ್ನು ಕೇಂದ್ರ ಸರ್ಕಾರ ಸಂಕಷ್ಟಕ್ಕೆ ದೂಡಿದೆ. ಅವರ ಬಗ್ಗೆ ಗಮನ ಹರಿಸುತ್ತಿಲ್ಲ. ಕಾಲ್ನಡಿಗೆಯಲ್ಲೇ ಊರುಗಳಿಗೆ ಹೋಗುತ್ತಿದ್ದರೂ ನಿರ್ಲಕ್ಷ್ಯವಹಿಸುತ್ತಿದೆ ಎಂಬಿತ್ಯಾದಿ ಆರೋಪಗಳನ್ನು ಕಾಂಗ್ರೆಸ್ ಮಾಡುತ್ತಲೇ ಬಂದಿದೆ.

ಅದರಲ್ಲೂ ಕಾಂಗ್ರೆಸ್​ ನಾಯಕಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ನಿಮ್ಮ ಕೈಲಾಗದೆ ಇದ್ದರೆ ಹೇಳಿ ನಾವೇ ವಲಸೆ ಕಾರ್ಮಿಕರಿಗೆ ಬಸ್​ ವ್ಯವಸ್ಥೆ ಮಾಡುತ್ತೇವೆ. 1000 ಬಸ್​​ಗಳನ್ನು ಮಂಗಳವಾರ ಸಂಜೆ 5ಗಂಟೆ ಹೊತ್ತಿಗೆ ಕಳಿಸಿಕೊಡುತ್ತೇವೆ. ಅದರಲ್ಲಿಯೇ ಕಾರ್ಮಿಕರಿಗೆ ಅವರ ಊರುಗಳಿಗೆ ತಲುಪಿಸಿ ಎಂದು ರಾಜ್ಯದ ಗೃಹ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಪ್ರಿಯಾಂಕಾ ಗಾಂಧಿಯವರ ಈ ಮಾತಿಗೆ ಹೆಚ್ಚೇನೂ ಪ್ರತಿಕ್ರಿಯೆ ನೀಡದ ಸಿಎಂ ಯೋಗಿ ಆದಿತ್ಯ ನಾಥ್​ ಅವರು ಒಪ್ಪಿಗೆ ಸೂಚಿಸಿದ್ದರು. ಬಸ್​ ವ್ಯವಸ್ಥೆ ಮಾಡಿ ಎಂದಿದ್ದರು.

ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಸಲಹೆಗಾರ ಒಂದು ಅಚ್ಚರಿ ಉಂಟು ಮಾಡುವ ಸತ್ಯವನ್ನು ತಿಳಿಸಿದ್ದಾರೆ. ವಲಸೆ ಕಾರ್ಮಿಕರಿಗಾಗಿ ಕಾಂಗ್ರೆಸ್​ ವ್ಯವಸ್ಥೆ ಮಾಡಿರುವ ವಾಹನಗಳು ಬಹುತೇಕ ದ್ವಿಚಕ್ರವಾಹನಗಳು, ರಿಕ್ಷಾ, ಕಾರು ಮತ್ತು ಗೂಡ್ಸ್​​ಗಳು ಹೊರತು ಬಸ್​ಗಳಲ್ಲ ಎಂದು ಹೇಳಿದ್ದಾರೆ.

ವಲಸೆ ಕಾರ್ಮಿಕರಿಗೆ ಊರಿಗೆ ಹೋಗಲು ವ್ಯವಸ್ಥೆ ಮಾಡಿರುವ ವಾಹನಗಳ ನೋಂದಣಿ ಸಂಖ್ಯೆಯ ಲಿಸ್ಟ್​​ನ್ನು ಕಾಂಗ್ರೆಸ್ ಕೊಟ್ಟಿದೆ. ನೋಂದಣಿ ಸಂಖ್ಯೆಯನ್ನು ಪ್ರಾಥಮಿಕ ಪರಿಶೀಲನೆಗೆ ಒಳಪಡಿಸಿದಾಗಲೇ ಗೊತ್ತಾಯಿತು ಅವೆಲ್ಲ ಚಿಕ್ಕಚಿಕ್ಕ ವಾಹನಗಳೆಂದು. ಬಸ್​ ಹೆಸರಿನಲ್ಲಿ ಗೂಡ್ಸ್ ಕ್ಯಾರಿಯರ್​, ಆಟೋ ರಿಕ್ಷಾ, ಸ್ಕೂಟರ್​ಗಳನ್ನು ನೀಡಿರುವ ಕಾಂಗ್ರೆಸ್​ ವಲಸೆ ಕಾರ್ಮಿಕರ ವಿಚಾರದಲ್ಲಿಯೂ ರಾಜಕೀಯ, ಹಗರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net