ಹಲವು ಲೋಪದೋಷ ಹಿನ್ನೆಲೆ:ರಾಜ್ಯಾದ್ಯಂತ ರಕ್ತ ನಿಧಿ ಕೇಂದ್ರಗಳ ತಪಾಸಣೆ

blood bank
Published on

ಬೆಂಗಳೂರು:ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ರಾಜ್ಯಾದ್ಯಂತ ರಕ್ತ ನಿಧಿ ಕೇಂದ್ರಗಳನ್ನು ಪರಿವೀಕ್ಷಣೆ ನಡೆಸಿದೆ.

ಕಲಬೆರಕೆ ಆಹಾರ ಬಗ್ಗೆ ಈಗಾಗಲೇ ಸಾಕಷ್ಟು ಕ್ರಮ ತೆಗೆದುಕೊಳ್ಳುತ್ತಿರುವ ಇಲಾಖೆ, ಇದೀಗ ರಕ್ತ ನಿಧಿ ಕೇಂದ್ರದಲ್ಲಿನ ಲೋಪದೋಷ ಸರಿಪಡಿಸುವ ಕಾರ್ಯಪ್ರವೃತ್ತವಾಗಿದೆ.

ಮೇ 6 ರಿಂದ ಮೇ 9 ರವರೆಗೆ ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ರಕ್ತ ನಿಧಿಗಳ ಕೇಂದ್ರಗಳ ಪರಿವೀಕ್ಷಣೆ ನಡೆಸಿದೆ. ಪ್ರಮುಖವಾಗಿ ರಕ್ತ ಘಟಕಗಳು, ಬೆಲೆ, ರಕ್ತದಾನ ಶಿಬಿರ, ಮಾಸಿಕ ಪ್ರಗತಿ,ಘಟಕಗಳು ಮತ್ತು ಕಿಟ್​ಗಳ ವೆಚ್ಚದ ಬಗ್ಗೆ ಇಲಾಖೆ, ಔಷಧ ಮತ್ತು ಕಾಂತಿವರ್ಧಕ ನಿಯಮಗಳ ಅಡಿ ಪರಿಶೀಲಿಸಿದೆ. ಜಿಲ್ಲಾ ಕೇಂದ್ರದಲ್ಲಿ ಉಪ ಔಷಧ ನಿಯಂತ್ರಕ, ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್​ಸಿಒ) ಬೆಂಗಳೂರು ವಿಭಾಗದ ಔಷಧ ಪರಿವೀಕ್ಷಕರೊಂದಿಗೆ ಹಾಗೂ ಜಿಲ್ಲಾವಾರು ಅಧಿಕಾರಿಗಳು, ಆಹಾರ ಸುರಕ್ಷತೆಯ ಅಂಕಿತಾಧಿಕಾರಿಗಳ ಜೊತೆಗೂಡಿ ರಕ್ತ ನಿಧಿ ಕೇಂದ್ರಗಳನ್ನು ಜಂಟಿ ಪರಿವೀಕ್ಷಣೆ ನಡೆಸಿ ಇಲಾಖೆಗೆ ವರದಿ ಸಹ ಸಲ್ಲಿಸಿದ್ದಾರೆ.

ಕೆಲವು ಜಿಲ್ಲೆಗಳಲ್ಲಿ ರಕ್ತ ನಿಧಿ ಕೇಂದ್ರಗಳು ಮನಸೋ ಇಚ್ಚೇ ಮುಂಗಡ ಹಣ ಇರಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳಿವೆ. ಯಾರಿಗಾದರೂ ರಕ್ತ ಬೇಕಾದಲ್ಲಿ ಗರಿಷ್ಠ 200 ರೂ. ಮುಂಗಡ ಹಣ ನೀಡಿ ರಕ್ತವನ್ನು ಕಾಯ್ದಿರಿಸಬಹುದು. ಅದಕ್ಕೆ ಪರ್ಯಾಯವಾಗಿ ರಕ್ತ ನೀಡಿದಲ್ಲಿ ಮುಂಗಡ ಹಣವನ್ನು ರಕ್ತ ನಿಧಿ ಕೇಂದ್ರಗಳು ಹಿಂದಿರುಗಿಸಬೇಕು.ಆದರೆ, ಕೆಲವು ರಕ್ತ ನಿಧಿ ಕೇಂದ್ರಗಳು 800 ರೂ.ನಿಂದ ಸಾವಿರ ಮುಂಗಡ ಹಣ ಪಡೆಯುತ್ತಿರುವ ಬಗ್ಗೆ ದೂರುಗಳಿವೆ. ಒಂದು ವೇಳೆ ಅದಕ್ಕೆ ಪರ್ಯಾಯ ರಕ್ತ ನೀಡದಿದ್ದರೆ ಆ ಮುಂಗಡ ಹಣವನ್ನು ಹಿಂದಿರುಗಿಸುತ್ತಿಲ್ಲ ಎಂಬ ಆರೋಪಗಳಿವೆ. ಅಲ್ಲದೆ, ರಕ್ತ ನಿಧಿ ಕೇಂದ್ರಗಳು ಸ್ವಚ್ಛವಾಗಿರಬೇಕು, ತರಬೇತಿ ಪಡೆದ ಸಿಬ್ಬಂದಿ ಇರಬೇಕು. ಆದರೆ, ಸಾಕಷ್ಟು ಸಂಚಾರ ರಕ್ತ ನಿಧಿ ಕೇಂದ್ರಗಲ್ಲಿ ಸ್ವಚ್ಛತೆ ಸಮಸ್ಯೆ ಕಾಡುತ್ತಿದೆ. ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ರಕ್ತ ಪಡೆಯಲಾಗುತ್ತಿದೆ. ತರಬೇತಿ ಇಲ್ಲದ ಸಿಬ್ಬಂದಿಯಿಂದ ರಕ್ತ ದಾನಿಗಳು ಸಂಕಷ್ಟಕ್ಕೆ ಸಿಲುಕಿದ ಉದಾಹರಣೆಗಳಿವೆ. ಈ ಎಲ್ಲದನ್ನು ನಿಯಂತ್ರಿಸುವ ಉದ್ದೇಶದಿಂದ ಇಲಾಖೆ, ರಾಜ್ಯಾದ್ಯಂತ ರಕ್ತ ನಿಧಿ ಕೇಂದ್ರಗಳ ಪರಿವೀಕ್ಷಣೆ ಮಾಡಲಾಗಿದೆ.

ದರ ವ್ಯತ್ಯಾಸ ಬಗ್ಗೆ ಪರಿಶೀಲನೆ

ಬಹುತೇಕ ರಕ್ತ ನಿಧಿ ಕೇಂದ್ರಗಳು ಸರ್ಕಾರ ನಿಗದಿಪಡಿಸಿದ ದರಲ್ಲಿ ರಕ್ತದ ಯೂನಿಟ್​ ಮಾರಾಟ ಮಾಡುತ್ತಿಲ್ಲ. ಒಂದು ಯೂನಿಟ್​ ಕನಿಷ್ಠ 1 ಸಾವಿರ, ಗರಿಷ್ಠ 1,400 ರೂ.ನಿಂದ 1,550 ರೂ.ಗೆ ಮಾರಾಟ ದರವನ್ನು ಸರ್ಕಾರ ನಿಗದಿಪಡಿಸಿದೆ. ಆದರೆ, ಖಾಸಗಿ ಆಸ್ಪತ್ರೆಯಲ್ಲಿ ವಾರ್ಡ್​ ಪ್ರಕಾರ ದರ ನಿಗದಿ ಮಾಡುತ್ತಿವೆ. ಸಾಮಾನ್ಯ ವಾರ್ಡ್​ಗೆ ಸಾವಿರ ರೂ, ಸೆಮಿ ಡಿಲೆಕ್ಸ್​ ವಾರ್ಡ್​ಗೆ 1,500 ರಿಂದ 1,600 ರೂ, ಸೂಟ್​ ರೂಮ್​ಗೆ 2,500 ರೂ.ದರ ವಿಧಿಸುತ್ತಿವೆ. ಇದು ರೋಗಿಗಳಿಗೆ ಹೊರೆಯಾಗಿದೆ. ಖಾಸಗಿ ಆಸ್ಪತ್ರೆಗಳು ಸಾಮಾನ್ಯವಾಗಿ ಹೊಸ ತಂತ್ರಜ್ಞಾನ ಮತ್ತು ಯಂತ್ರಗಳ ಕಾರಣಗಳನ್ನು ನೀಡಿ ರೋಗಿಗಳಿಂದ ಹೆಚ್ಚಿನ ಬೆಲೆಯನ್ನು ವಿಧಿಸುತ್ತಿರುವುದು ಬೆಳಕಿಗೆ ಬಂದಿದೆ.

ಇತರೆ ಮುಖ್ಯಾಂಶಗಳು:

* ರಾಜ್ಯದಲ್ಲಿರುವ ಒಟ್ಟು ರಕ್ತನಿಧಿ ಕೇಂದ್ರ 230

* ಸರ್ಕಾರಿ ರಕ್ತನಿಧಿ ಕೇಂದ್ರ 43

* ದತ್ತಿ (ಚಾರಿಟಬಲ್​) ರಕ್ತನಿಧಿ ಕೇಂದ್ರ 66

* ಖಾಸಗಿ ಆಸ್ಪತ್ರೆಗೆ ಹೊಂದಿಕೊಂಡಿರುವ ರಕ್ತ ನಿಧಿ ಕೇಂದ್ರ 108

* ಸ್ವತಂತ್ರ ರಕ್ತನಿಧಿ ಕೇಂದ್ರ 5

* ಇಂಡಿಯನ್​ ರೆಡ್​ ಕ್ರಾಸ್​ ಸೊಸೈಟಿ ರಕ್ತನಿಧಿ ಕೇಂದ್ರ 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net