

ಬೆಂಗಳೂರು: ಬಾಣಂತಿಯರ ಸಾವುಗಳಿಗೆ ರಿಂಗರ್ ಲ್ಯಾಕ್ಟೇಟ್ ದ್ರಾವಣದ ಸಮಸ್ಯೆ ಮಾತ್ರವಲ್ಲ, ಹಲವು ವೈಲ್ಯಗಳ ಮೇಲೆ ತಜ್ಞರ ಸಮಿತಿ ಬೆಳಕು ಚೆಲ್ಲಿದೆ. ಅಲ್ಲದೆ, ಶೇಕಡ 70ಕ್ಕಿಂತ ಹೆಚ್ಚು ತಾಯಂದಿರ ಸಾವುಗಳನ್ನು ತಡೆಯಬಹುದಿತ್ತು ಎಂದೂ ಹೇಳಿದೆ.
ಕಳೆದ ವರ್ಷ ಸಂಭವಿಸಿದ ಬಾಣಂತಿಯರ ಸಾವುಗಳು ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿ, ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಆಕ್ರೋಶಕ್ಕೆ ಗುರಿಯಾಗಿತ್ತು. ವಿಧಾನ ಮಂಡಲದ ಬೆಳಗಾವಿ ಅಧಿವೇಶನದಲ್ಲಿ ಪ್ರತಿಪಕ್ಷಗಳು ಮುಗಿಬಿದ್ದಿದ್ದವು.
ತಜ್ಞರ ತಂಡದಿಂದ ತನಿಖೆ ನಡೆಸಿ ಕ್ರಮವಹಿಸಲಾಗುವುದು ಸರ್ಕಾರ ಭರವಸೆ ನೀಡಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರ ನೇತೃತ್ವದಲ್ಲಿ ರಚಿತ ರಾಜ್ಯಮಟ್ಟದ ತಜ್ಞರ ಸಮಿತಿ ಮಧ್ಯಂತರ ವಿಶ್ಲೇಷಣಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಧ್ಯಂತರ ವಿಶ್ಲೇಷಣಾ ವರದಿ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡರು.
ತಜ್ಞರು ಈ ವರದಿ ಸಲ್ಲಿಸುವ ಮುನ್ನವೇ ಸರ್ಕಾರ ಆಸ್ಪತ್ರೆಗಳಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸುವ ಕೆಲಸ ಶುರುವಾಗಿದೆ. ಇದೀಗ ಸಮಿತಿ ಶಿಾರಸುಗಳ ಪ್ರಕಾರ ಅಗತ್ಯ ಕ್ರಮವಹಿಸಲು ಬಜೆಟ್‌ನಲ್ಲಿ ತಿಳಿಸಿದಂತೆ 360 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದರು.
ತಜ್ಞರ ಸಮಿತಿಯು ಏಪ್ರಿಲ್ 1, 2024 ರಿಂದ 2024ರ ಡಿಸೆಂಬರ್ ಅಂತ್ಯದವರೆಗೆ ಸಂಭವಿಸಿದ ಒಟ್ಟು 464 ತಾಯಂದಿರ ಸಾವುಗಳನ್ನು ಪರೀಕ್ಷಿಸಿ ವಿಶ್ಲೇಷಣಾ ವರದಿಯನ್ನು ಸಲ್ಲಿಸಿದೆ.
ಪ್ರಮುಖಾಂಶಗಳ ಪೈಕಿ ಶೇ.70ಕ್ಕಿಂತ ಹೆಚ್ಚು ತಾಯಂದರಿ ಸಾವುಗಳನ್ನು ತಡೆಯಬಹುದಿತ್ತು. 10 ಸಂದರ್ಭಗಳಲ್ಲಿ ವೈದ್ಯರ ನಿರ್ಲಕ್ಷ್ಯ ಕಂಡು ಬಂದಿದೆ ಎಂದು ತಿಳಿಸಿ ಶಿಸ್ತು ಕ್ರಮಕ್ಕೆ ಶಿಾರಸು ಮಾಡಿದೆ.
ಈ ಹಿನ್ನೆಲೆಯಲ್ಲಿ 10 ವೈದ್ಯರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ನಿಯಮದ ಪ್ರಕಾರ ಈ ವೈದ್ಯರ ವಿಚಾರಣೆ ನಡೆದಿದ್ದು, ಸೇವೆಯಿಂದ ಇನ್ನೂ ಅಮಾನತು ಮಾಡಿಲ್ಲವೆಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.