ಪ್ಯಾರಿಸ್: ಸಿಟಿ ಆಫ್ ಲವ್ ಎಂದೇ ಖ್ಯಾತಿ ಪಡೆದಿರುವ ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ 33ನೇ ಆವೃತ್ತಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಯುವ ಶೂಟರ್ ಮನು ಭಾಕರ್ ಅವರ ಅಭಿಯಾನ ಅಂತ್ಯಗೊಂಡಿದೆ. ಹ್ಯಾಟ್ರಿಕ್ ಪದಕ ಸಾಧಿಸುವ ಅವರ ಕನಸು ಭಗ್ನಗೊಂಡಿದೆ.
ಈ ಹಿಂದೆ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದ ಮನು, ಈ ಬಾರಿ 25 ಮಿ. ಪಿಸ್ತೂಲ್ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಭಾರತಕ್ಕಾಗಿ ಮೂರನೇ ಪದಕ ಗೆಲ್ಲುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ.
ಫ್ರಾನ್ಸ್‌ನ ಚಟೌರೌಕ್ಸ್‌ನಲ್ಲಿ ನಡೆದ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಆರಂಭದಲ್ಲಿ ಮುನ್ನಡೆ ಪಡೆದಿದ್ದ ಮನು, ಎಲಿಮಿನೇಷನ್ ಸುತ್ತಿನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಫೈನಲ್ನಲ್ಲಿ ಮನು ಭಾಕರ್ 28 ಅಂಕಗಳೊಂದಿಗೆ 4ನೇ ಸ್ಥಾನ ಪಡೆದರೆ, ಕಂಚಿನ ಪದಕ ಗೆದ್ದ ಹಂಗೇರಿಯಾದ ಮೇಜರ್ ವೆರೋನಿಕಾ 31 ಪಾಯಿಂಟ್ಸ್ ಕಲೆಹಾಕಿದ್ದರು. ಅಂದರೆ ಕೇವಲ ಮೂರು ಅಂಕಗಳ ಅಂತರದಿಂದ ಮೂರನೇ ಪದಕ ಗೆಲ್ಲುವ ಅವಕಾಶವನ್ನು ಮನು ಭಾಕರ್ ಕೈಚೆಲ್ಲಿಕೊಂಡರು.
ಇದನ್ನೂ ಓದಿ: ಅಪ್ರಾಪ್ತೆಯ ಕೈ ಹಿಡಿದು ಪ್ರಪೋಸ್ ಮಾಡಿದ ಯುವಕನಿಗೆ ಕಠಿಣ ಕಾರಾಗೃಹ ಶಿಕ್ಷೆ; ನ್ಯಾಯಾಧೀಶರು ಹೇಳಿದ್ದಿಷ್ಟು
ಮಹಿಳಾ 25 ಮೀಟರ್ ಪಿಸ್ತೂಲ್ ಫೈನಲ್ ಸ್ಪರ್ಧೆಯ ಫಲಿತಾಂಶ:
- ಜಿ ಯಾಂಗ್ (ಸೌತ್ ಕೊರಿಯ)- 37 ಅಂಕಗಳು
- ಕ್ಯಾಮಿಲ್ಲೆ ಜೆಡ್ರೆಜೆವ್ಸ್ಕಿ (ಫ್ರಾನ್ಸ್)- 37 ಅಂಕಗಳು
- ಮೇಜರ್ ವೆರೋನಿಕಾ (ಹಂಗೇರಿ)- 31 ಅಂಕಗಳು
- ಮನು ಭಾಕರ್ (ಭಾರತ)- 28 ಅಂಕಗಳು