

ನವದೆಹಲಿ: ಏರ್ ಇಂಡಿಯಾ ತನ್ನ ಮಹಿಳಾ ಕ್ಯಾಬಿನ್ ಸಿಬ್ಬಂದಿಯ ಸಮವಸ್ತ್ರದಲ್ಲಿ ಬದಲಾವಣೆಯನ್ನು ತರಲು ಆಲೋಚಿಸುತ್ತಿದೆ. ಕಳೆದ 60 ವರ್ಷಗಳಿಂದ, ಫ್ಲೈಟ್ ಅಟೆಂಡೆಂಟ್ಗಳು ಸಾಂಪ್ರದಾಯಿಕ ಭಾರತೀಯ ಉಡುಗೆಯಾದ ಸೀರೆಗಳನ್ನು ಧರಿಸುತ್ತಿದ್ದರು. ಆದರೆ ಇದೀಗ ಏರ್ ಇಂಡಿಯಾ ಗಗನಸಖಿಯರ ಸೀರೆ ಟ್ರೆಂಡ್ ಬದಲಾಗುವ ಸಾಧ್ಯತೆ ಇದೆ ಎಂದು ಏರ್ಲೈನ್ನ ಮೂಲವೊಂದರಿಂದ ತಿಳಿದು ಬಂದಿದೆ.
ಏರ್ಲೈನ್ನ ಫ್ಲೈಟ್ ಅಟೆಂಡೆಂಟ್ಗಳು ಆರು ದಶಕಗಳಿಂದ ಸೀರೆ ಧರಿಸಿಕೊಂಡೇ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಮುಂದಿನ ನವೆಂಬರ್ ವೇಳೆಗೆ ದೀರ್ಘಕಾಲದ ಈ ಟ್ರೆಂಡ್ ಬದಲಾಗಬಹುದು ಎಂದು ನಿರೀಕ್ಷೆ ಮಾಡಲಾಗಿದ್ದು, ಆಧುನಿಕ ರೀತಿಯ ಸಮವಸ್ತ್ರಗಳು ಇವುಗಳ ಬದಲು ಬರಲಿದೆ ಎನ್ನಲಾಗಿದೆ.
ಏರ್ ಇಂಡಿಯಾ ಮಹಿಳಾ ಸಿಬ್ಬಂದಿಗೆ ಸೀರೆಯನ್ನು ಪರಿಚಯಿಸಿದ್ದ ಜೆಆರ್ಡಿ ಟಾಟಾ. 1962ರಲ್ಲಿ ಅವರು, ಸ್ಕರ್ಟ್, ಜಾಕೆಟ್ ಹಾಗೂ ಹ್ಯಾಟ್ನ ಬದಲು ಸಾಂಪ್ರದಾಯಿಕ ಸೀರೆಯನ್ನು ಗಗನಸಖಿಯರಿಗೆ ಪರಿಚಯಿಸಿದ್ದರು. ಅಂದಿನಿಂದ ಏರ್ ಇಂಡಿಯಾ ಇದೇ ಟ್ರೆಂಡ್ ಅನ್ನು ಮುಂದುವರಿಸಿಕೊಂಡು ಹೋಗಿದ್ದರು. ಇತ್ತೀಚಿನ ವರದಿಯ ಪ್ರಕಾರ, ಏರ್ ಇಂಡಿಯಾ ತಮ್ಮ ಮಹಿಳಾ ಸಿಬ್ಬಂದಿಯ ಸಮವಸ್ತ್ರವನನ್ನು ಬದಲಾಯಿಸುವ ನಿಟ್ಟಿನಲ್ಲಿ ಗಮನ ನೀಡುತ್ತಿದೆ.
ಏರ್ ಇಂಡಿಯಾ ಮಹಿಳಾ ಸಿಬ್ಬಂದಿಗೆ ಡಿಸೈನರ್ ಚೂಡಿದಾರ್ಗಳು ಹಾಗೂ ಪುರುಷ ಸಿಬ್ಬಂದಿಗೆ ಡಿಸೈನರ್ ಸೂಟ್ಗಳನ್ನು ಕಂಪನಿ ವಿನ್ಯಾಸ ಮಾಡುತ್ತಿದೆ. ಪ್ರಖ್ಯಾತ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಈ ಹೊಸ ಸಮವಸ್ತ್ರಗಳನ್ನು ವಿನ್ಯಾಸ ಮಾಡಲಿದ್ದಾರಂತೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ ಎನ್ನಲಾಗಿದೆ.
ಏರ್ ಇಂಡಿಯಾದ ಸಿಗ್ನೇಚರ್ ಶೈಲಿಯನ್ನು ಪ್ರತಿಬಿಂಬಿಸುವ ಹೊಸ ಸಮವಸ್ತ್ರಗಳು ಗಾಢ ಕೆಂಪು ಮತ್ತು ಚಿನ್ನದ ಬಣ್ಣಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇನ್ನು ಏರ್ ಇಂಡಿಯಾ ಜತೆ ವಿಲೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ವಿಸ್ತಾರ ಏರ್ಲೈನ್ಸ್ ಕೂಡ ಈ ಸಮವಸ್ತ್ರವನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ.
ಏರ್ ಇಂಡಿಯಾದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್ಬೆಲ್ ವಿಲ್ಸನ್ ಮಾತನಾಡಿ, ಹೊಸ ಏರ್ಬಸ್ ಎ350 ವಿಮಾನವು ಬಂದ ನಂತರ ಏರ್ಲೈನ್ನ ಹೊಸ ನೋಟವನ್ನು ಅನಾವರಣಗೊಳಿಸಲಾಗುವುದು, ಇದು ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಸಾಧ್ಯವಾಗಬಹುದು ಎಂದು ತಿಳಿಸಿದ್ದಾರೆ. ಆದರೆ, ಏರ್ ಇಂಡಿಯಾದ ಯಾವುದೇ ಸಿಬ್ಬಂದಿ ಈ ಬದಲಾವಣೆಯನ್ನು ದೃಢೀಕರಣ ಮಾಡಿಲ್ಲ. ನವೆಂಬರ್ 2023 ರ ವೇಳೆಗೆ ಅನಾವರಣಗೊಳ್ಳುವ ನಿರೀಕ್ಷೆಯಿದೆ.