ಜಗತ್ತಿಗೆ ಪರಿಚಯವಾಗಲಿ ತುಳು ಸಂಸ್ಕೃತಿ - ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ - ಮಾಣಿಲ ಕ್ಷೇತ್ರದಲ್ಲಿ ಬೊಳ್ಳಿ ಪರ್ಬೊಡು ತುಳುಸಿರಿ

PTR_17 AUG_8
Published on


ವಿಟ್ಲ: ತುಳು ಸಂಸ್ಕೃತಿಯ ತಿರುಳನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರಯತ್ನವಾಗಬೇಕು. ನಾಡಿನ ಆಚಾರ ವಿಚಾರವನ್ನು ಗೌರವಿಸುವ ಜತೆಗೆ ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯಕ್ರಮ ನಡೆಯಬೇಕು. ಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ವಿದ್ಯಾರ್ಥಿಗಳಲ್ಲಿ ಮಾಡಬೇಕು. ತುಳುನಾಡಿನ ವಿಶಿಷ್ಟ ಆಚರಣೆಯನ್ನು ಸರಿಯಾದ ರೀತಿಯಲ್ಲಿ ಪಾಲಿಸಬೇಕು ಎಂದು ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಬೆಳ್ಳಿಹಬ್ಬ ಮಹೋತ್ಸವದ ಸಮಾರೋಪ ಸಮಾರಂಭದ ಅಂಗವಾಗಿ ಬೊಳ್ಳಿ ಪರ್ಬೊಡು ತುಳುಸಿರಿ ಕಾರ್ಯಕ್ರಮ ಉದ್ಘಾಟನೆಯಲ್ಲಿ ಆಶೀರ್ವಚನ ನೀಡಿದರು.

ಶಾಸಕ ಉಮನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಂ ಪೂಜಾರಿ ಮಾತನಾಡಿ ಹಿರಿಯರ ಆರಾಧನಾ ಪದ್ಧತಿ, ಅನುಭವ, ಆಹಾರ ಪದ್ಧತಿಯನ್ನು ಮುಂದುವರಿಸುವ ಅನಿವಾರ್ಯತೆಯಿದೆ. ತುಳುನಾಡಿನ ಸೂಕ್ಷ್ಮ ವಿಚಾರಗಳ ಮಹತ್ವ ಅರಿಯಬೇಕಾಗಿದೆ. ಕೃಷಿ ಸಂಸ್ಕೃತಿಯನ್ನು ಬಿಟ್ಟು ಹೋಗುತ್ತಿರುವುದರ ಫಲವನ್ನು ಕಾಣುತ್ತಿದ್ದೇವೆ. ಮನುಷ್ಯನ ಅತಿರೇಕದ ನಡವಳಿಕೆಯಿಂದ ಅಪಾಯಗಳನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಅಕಾಡೆಮಿಗಳು ದೂರದೃಷ್ಟಿಯ ಜತೆಗೆ ಪ್ರಾಮಾಣಿಕ ಪ್ರಯತ್ನದಲ್ಲಿ ಸಾಗಬೇಕು ಎಂದರು.

ಪತ್ರಕರ್ತ ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು, ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ಅಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿದರು. ಡಾ. ವಾರಿಜಾ ನಿರ್ಬೈಲ್ ಗಮಕ ವಾಚನ ನಡೆಸಿದರು. ದಯಾನಂದ ಜಿ. ಕತ್ತಲ್ಸಾರ್, ಅಶೋಕ್ ಶೆಟ್ಟಿ ಸರಪಾಡಿ ಉಪಸ್ಥಿತರಿದ್ದರು.


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ಉದ್ಯಮಿ ಭಾಸ್ಕರ ಶೆಟ್ಟಿ ಪುಣೆ, ಬೆಳ್ಳಿಹಬ್ಬ ಮಹೋತ್ಸವ ಸಮಿತಿ ಅಧ್ಯಕ್ಷಾ ಮೋನಪ್ಪ ಭಂಡಾರಿ, ಟ್ರಸ್ಟಿ ತಾರಾನಾಥ ಕೊಟ್ಟಾರಿ ಉಪಸ್ಥಿತರಿದ್ದರು. ಎಚ್. ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.


ತುಳುವರ ಆಚಾರ-ವಿಚಾರ, ಸಂಸ್ಕಾರ-ಸಂಸ್ಕೃತಿ ತುಳುನಾಡಿನ ಅಡಿಪಾಯವಾಗಿದೆ. ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಶ್ರಮ ಅಗತ್ಯವಿದೆ. ಸಾಹಿತ್ಯದ ಜತೆಗೆ ತುಳುನಾಡಿನ ಆಚರಣೆಗಳಿಗೆ ಪ್ರೋತ್ಸಾಹ ನೀಡಬೇಕು. ತುಳುನಾಡಿನ ಪ್ರತಿಯೊಬ್ಬರಿಗೆ ಜಗತ್ತಿನ ವಿಚಾರಗಳಿಗೆ ಸ್ಪಂದಿಸುವ ಶಕ್ತಿಯಿದೆ. ಗಾಳಿ, ನೀರು, ಆಹಾರ ವಿಷವಾಗುತ್ತಿದ್ದು, ಆರೋಗ್ಯದ ಮೇಲೆ ನೇರ ಪರಿಣಾಮವಾಗುತ್ತಿದೆ.
| ಉಮಾನಾಥ ಕೋಟ್ಯಾನ್, ಮೂಡುಬಿದಿರೆ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net