

ವಿಟ್ಲ: ಪ್ರಕೃತಿ ಆರಾಧನೆಯ ಮಹತ್ವವನ್ನು ತಿಳಿಯುವ ಜತೆಗೆ ದೇಶದ ಉಳಿವಿಗಾಗಿ ಕಾರ್ಯ ನಿರ್ವಹಿಸಬೇಕು. ಜಗ್ಗತಿನ ಪ್ರತಿಯೊಬ್ಬರನ್ನು ಪ್ರೀತಿಸಿ ಆದರಿಸಿದಾಗ ದೇವರ ಪ್ರೀತಿಯನ್ನು ಅನುಭವಿಸಬಹುದು. ಯುವ ಪೀಳಿಗೆಯನ್ನು ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚು ತೊಡಗಿಕೊಳ್ಳುವಂತೆ ಮಾಡಬೇಕು. ಮಕ್ಕಳಿಗೆ ಧರ್ಮ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಪರಿವರ್ತನೆ ಕಾಣಬೇಕು ಎಂದು ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಬೆಳ್ಳಿಹಬ್ಬ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಸಾಽ ಮಾತಾನಂದಮಯೀ ಆಶೀರ್ವಚನ ನೀಡಿ ಶ್ರದ್ಧಾ ಭಾವನೆಯಿಂದ ಯಶಸ್ಸಿನ ಹಾದಿ ಲಭಿಸುತ್ತದೆ. ಸಾಧನೆಯ ಜತೆಗೆ ದೃಢ ಸಂಕಲ್ಪವಿಟ್ಟು ಮಾಡುವ ಕೆಲಸದಲ್ಲಿ ಯಶಸ್ಸು ಲಭಿಸುತ್ತದೆ. ಜನ, ಮನ, ಧರ್ಮ ಜಾಗೃತಿಯ ಕಾರ್ಯ ಮಾಣಿಲ ಶ್ರೀಧಾಮದ ಮೂಲಕ ನಡೆಯುತ್ತಿದೆ. ಮಾನವೀಯ ಮೌಲ್ಯಗಳು ಉಳಿಯಲು ದೇವಿಯ ಅನುಗ್ರಹ ಮುಖ್ಯ ಎಂದು ತಿಳಿಸಿದರು.
ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಯೋಜನೆಯ ಹಾಗೂ ಪಂಜಿಕಲ್ಲು ಬುಡೋಳಿ ನೇತಾಜಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಮಾಣಿಲ ಶ್ರೀಗಳಿಗೆ ಗೌರವಾರ್ಪಣೆ ನಡೆಯಿತು. ಅಧ್ಯಕ್ಷತೆಯನ್ನು ಮೂಡುಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಷನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ವಹಿಸಿದ್ದರು.
ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಂಗಳೂರು ಮಹಾನಗರಪಾಲಿಕೆ ಮಹಾಪೌರ ಸುಽರ್ ಶೆಟ್ಟಿ ಕಣ್ಣೂರು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಉಗ್ರಾಣ ಮುತ್ಸದ್ದಿ ಭುಜಬಲಿ ಧರ್ಮಸ್ಥಳ, ಉದ್ಯಮಿಗಳಾದ ಬಾಲಕೃಷ್ಣ ರೈ ಮುಂಬಯಿ, ಭಾಸ್ಕರ ಶೆಟ್ಟಿ ಪುಣೆ, ರಘು ಮೂಲ್ಯ, ದಿವಾಕರ್ ಮುಂಬಯಿ, ಲೋಕೇಶ್ ಕುಲಾಲ್, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ಜಿತೇಂದ್ರ ಕೊಟ್ಟಾರಿ, ಶೆಡ್ಯೆ ಮಂಜುನಾಥ ಭಂಡಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಽಕಾರಿ ರಮೇಶ್, ಮಾಣಿಲಶ್ರೀ ಮಹಾಲಕ್ಷ್ಮೀ ಮಹಿಳಾ ಪ್ರತಿಷ್ಠಾನದ ಗೌರವಾಧ್ಯಕ್ಷೆ ರೇವತಿ ಪೆರ್ನೆ, ಅಧ್ಯಕ್ಷೆ ವನಿತಾ ವಿ.ಶೆಟ್ಟಿ, ಸಮಿತಿ ಅಧ್ಯಕ್ಷ ಮೋನಪ್ಪ ಭಂಡಾರಿ ಮಂಗಳೂರು, ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು, ಟ್ರಸ್ಟಿಗಳಾದ ಮಚ್ಚೇಂದ್ರನಾಥ್ ಸಾಲ್ಯಾನ್ ಬಿ.ಸಿ.ರೋಡ್, ಪುರುಷೋತ್ತಮ ಚೇಂಡ್ಲ ಬೆಂಗಳೂರು, ಉಮೇಶ್ ಕುಲಾಲ್ ಬೆಂಗಳೂರು, ಮಹೇಶ್ ಬೊಮ್ಮಸಂದ್ರ ಬೆಂಗಳೂರು, ಶ್ರೀಧಾಮ ಮಿತ್ರವೃಂದದ ಬಾಲಕೃಷ್ಣ ರೈ ಕೆಳಗಿನಮನೆ ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟಿ ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ಪ್ರಾಸ್ತಾವನೆಗೈದರು. ಟ್ರಸ್ಟಿ ಚಂದ್ರಶೇಖರ ಮೂಲ್ಯ ಮುಂಬಯಿ ವಂದಿಸಿದರು. ಎಚ್. ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ
ದ.ಕ ಸಂಸದ ಕ್ಯಾ.ಬ್ರಿಜೇಶ್ ಚೌಟ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಧಾರ್ಮಿಕ ಪರಿಷತ್ ಸದಸ್ಯರಾದ ದೇವಪ್ಪ ಕುಲಾಲ್ ಪಂಜಿಕಲ್ಲು, ಎಚ್. ಕೆ. ನಯನಾಡು ಅವರನ್ನು ಸಮ್ಮಾನಿಸಲಾಯಿತು.
ದೇಶದ ಇತಿಹಾಸವನ್ನು ಗಮನಿಸಬೇಕು. ಧರ್ಮ ಜಾಗೃತಿಯ ಕಾರ್ಯವನ್ನು ಸಾಧು ಸಂತರು ಕಾಲಕಾಲದಲ್ಲಿ ನಡೆಸಿಕೊಂಡು ಬಂದಿದ್ದಾರೆ. ಧರ್ಮದ ಆಚರಣೆಯನ್ನು ಶಾಸ್ತ್ರೀಯವಾಗಿ ನಡೆಸಲು ದೇಶದಲ್ಲಿ ಸ್ವಾತಂತ್ರ್ಯ ಇದೆ. ಧರ್ಮದ ಹಾದಿಯಲ್ಲಿ ಪ್ರತಿಯೊಬ್ಬರೂ ನಡೆಯುವ ಕೆಲಸವಾಗಬೇಕು.
| ಡಾ. ಎಂ. ಮೋಹನ್ ಆಳ್ವ
ಅಧ್ಯಕ್ಷರು, ಮೂಡುಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಷನ್