

ವಿಟ್ಲ: ಆಚಾರ, ಅನುಷ್ಠಾನವೇ ಸಂಪತ್ತು ಆಗಿದ್ದು, ಧರ್ಮಯುಕ್ತ ಜೀವನದಿಂದ ಭಗವಂತನ ಪ್ರಾಪ್ತಿಯಾಗುತ್ತದೆ. ಅಂತರಂಗ ನಿಯಂತ್ರಣ ಕಳೆದುಕೊಳ್ಳದೆ, ತನು ಮನ ಮಲಿನವಾಗದೆ, ದೇಹ, ಮನಸ್ಸುಗಳ ಕಾಳಜಿಯಿರಲಿ. ಅಡಕೆ ಕೃಷಿಕರು ಬೆಳೆ ಕುಸಿತದ ಬಗ್ಗೆ ಚಿಂತಿಸಬೇಕಾಗಿಲ್ಲ. ಪೂಗಪೂಜೆಯೊಂದಿಗೆ ಶ್ರೀ ಚಕ್ರಾರ್ಚನೆ ನಡೆದಿದೆ. ಮುಂದಿನ ಸಾಲಿನಲ್ಲಿ ಅಡಕೆ ಬೆಳೆ, ಬೆಲೆ ಜಾಸ್ತಿಯಾಗಲಿ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.
ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಶ್ರೀರಾಮ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವ, ಹೋಬಳಿ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ನೀಡಿದರು.
ಶಕಟಪುರ ಶ್ರೀಕೃಷ್ಣಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಮಾಯೆಯೇ ಜಗತ್ತಿನ ಎಲ್ಲ ಆಗುಹೋಗುಗಳಿಗೆ ಕಾರಣವಾಗಿದ್ದು, ಸೃಷ್ಟಿ, ಲಯ, ಸ್ಥಿತಿಯಿರುತ್ತದೆ. ಅವಿದ್ಯೆಯನ್ನು ತಿಳಿಯುವ ಕಾರ್ಯವಾದಾಗ ಅದು ಮನುಷ್ಯನಿಂದ ದೂರವಾಗುತ್ತದೆ. ಸಾಧಕ ಸದ್ಗುರುವಿನೆಡೆಗೆ ಸಾಗಿದಾಗ ಜ್ಞಾನವನ್ನು ಪಡೆಯಬಹುದು. ಶಿಷ್ಯರು ಜಾಗೃತಿಯಾಗಿದ್ದಾಗ ಮಠ ಉತ್ತುಂಗಕ್ಕೆ ಏರಲು ಸಹಕಾರಿ ಎಂದು ತಿಳಿಸಿದರು.
ಪುತ್ತೂರು ಮಹಾಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ, ನಿಟ್ಟೆ ಯುನಿವರ್ಸಿಟಿ ವಿಸಿ ಡಾ.ಎಂ.ಎಸ್.ಮೂಡಿತ್ತಾಯ, ಸಂಸ್ಥೆ ಉಪಾಧ್ಯಕ್ಷ ರಾಜೇಂದ್ರ ಮಡಿಯಾಲ್, ಡಾ.ಸಿ.ಎಸ್.ಶಾಸ್ತ್ರಿ, ಡಾ.ರವಿಸುಬ್ರಹ್ಮಣ್ಯ ಮರಕ್ಕಿಣಿ, ಮುರಳೀಕೃಷ್ಣ ಹಸಂತಡ್ಕ, ಶ್ರೀಮಠದ ಪಿಆರ್ ಒ ಹರಿಪ್ರಸಾದ್ ಪೆರಿಯಾಪು, ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನಭಾಸ್ಕರ ಹೆಗಡೆ, ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಉಪ್ಪಿನಂಗಡಿ ಮಂಡಲಾಧ್ಯಕ್ಷ ಈಶ್ವರಪ್ರಸನ್ನ ಪೆರ್ನೆಕೋಡಿ, ಮುಳ್ಳೇರಿಯ ಮಂಡಲಾಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ದೇವಿಕಾ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.
ಮಾಣಿಮಠ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಪ್ರಸ್ತಾವನೆಗೈದರು. ಮಂಗಳೂರು ಮಂಡಲ ಅಧ್ಯಕ್ಷ ಉದಯಶಂಕರ್ ನೀರ್ಪಾಜೆ ಮತ್ತು ಸುರೇಶ್ ಬಿ.ಎಸ್. ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಕಾರ್ಯಕ್ರಮ:
ರಾಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಶ್ರೀ ಶಂಕರ ಪಂಚಮಿ ಉತ್ಸವದ ಶ್ರೀ ಮಹಾಪಾದುಕೆ ರಥ ಸಂಚಾರಕ್ಕೆ ಚಾಲನೆ ನೀಡಲಾಯಿತು. ರಾಘವೇಶ್ವರ ಶ್ರೀಗಳು ಶಕಟಪುರ ಶ್ರೀಗಳಿಗೆ ಶ್ವೇತಛತ್ರವನ್ನು ಪ್ರಧಾನ ಮಾಡಿದರು. ಮಾಣಿ ಮಠದ ಶ್ರೀರಾಮ ಸಂಸ್ಕೃತ ವೇದಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ವಿದ್ಯಾರ್ಥಿ ಅಭೀಷ್ಟ ಅನಿಸಿಕೆ ವ್ಯಕ್ತಪಡಿಸಿದರು. ನೂತನ ಗುರುಕ್ಕಾರರಿಗೆ ಸಾಟಿ ಸನ್ನದು ಪ್ರಧಾನ ಮಾಡಲಾಯಿತು.