

ಕಾರ್ಕಳ: ಅನಾರೋಗ್ಯಪೀಡಿತ ಮಹಿಳೆಯ ಆರೈಕೆಗಾಗಿ ಬಂದಿದ್ದ ಹೋಂ ನರ್ಸ್ ಲಕ್ಷಾಂತರ ಬೆಲೆ ಬಾಳುವ ಮಾಂಗಲ್ಯ ಸರ ಕಳವುಗೈದು ಪರಾರಿಯಾಗಿದ್ದಾಳೆ.
ಬೆಳ್ಮಣ್ ನಿವಾಸಿ ನಾರಾಯಣ ತಂತ್ರಿ (82) ಎಂಬುವರ ಪತ್ನಿ ಲೀಲಾ (79) ಒಂದು ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದು, ಅವರನ್ನು ನೋಡಿಕೊಳ್ಳಲು ಡಿ.12 ರಂದು ಮಂಜುಳಾ ಎಂಬಾಕೆಯನ್ನು ಸೇರಿಸಿಸಿದ್ದರು. ಮೂರು ದಿನದಲ್ಲಿ ಆಕೆಯನ್ನು ಹಿಂದಕ್ಕೆ ಕರೆಸಿಕೊಂಡು ಗೌರಿ ಎಂಬಾಕೆಯನ್ನು ನೇಮಕ ಮಾಡಿದ್ದರು. ಗೌರಿ ಜ.3ರಂದು ತಾಯಿಗೆ ಹುಷಾರಿಲ್ಲ ಮನೆಗೆ ಹೋಗಿ ಸಂಜೆ 6 ಗಂಟೆಗೆ ಬರುತ್ತೇನೆಂದು ತಿಳಿಸಿದ್ದಳು. ಅದರಂತೆ ನಾರಾಯಣ ತಂತ್ರಿ 500 ರೂ. ಕೊಟ್ಟು ಆಕೆಯನ್ನು ಪಡುಬಿದ್ರಿ ಬಸ್ಸ್ಟಾೃಂಡ್ಗೆ ಬಿಟ್ಟುಬಂದಿದ್ದರು. ಮನೆಗೆ ಬಂದು ನೋಡಿದಾಗ ಪತ್ನಿಯ ಕುತ್ತಿಗೆಯಲ್ಲಿದ್ದ 3,50,000 ರೂ. ಬೆಲೆ ಬಾಳುವ 6 ಪವನ್ ಚಿನ್ನದ ಮಾಂಗಲ್ಯ ಸರ ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು. ಗೌರಿಯ ಮೊಬೈಲ್ಗೆ ಕರೆ ಮಾಡಿದ್ದಾಗ ಸ್ವಿಚ್ಡ್ ಆಫ್ ಆಗಿತ್ತು ಎಂದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.