ಪರೋಪಕಾರವೇ ನೈಜ ಶ್ರೀಮಂತಿಕೆ - ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಪಿ.ರವೀಂದ್ರ ರಾವ್ ಅಭಿಮತ

mng--28 Jan Blind eye camp
Published on

ಮಂಗಳೂರು: ಜೀವನದಲ್ಲಿ ಸಹನೆ, ತಾಳ್ಮೆ , ಮಾನವೀಯತೆ, ಇನ್ನೊಬ್ಬರಿಗೆ ಸಹಾಯ ಮಾಡುವ ಚಿಂತನೆಯೇ ನಿಜವಾದ ಶ್ರೀಮಂತಿಕೆ ಎಂದು ಅಂಧರ ಸೇವಾ ಸಂಘದ ಕಾರ್ಯದರ್ಶಿ ಪಿ. ರವೀಂದ್ರರಾವ್ ಹೇಳಿದರು.

ಅಂಧರ ಸೇವಾ ಸಂಘ, ದಕ್ಷಿಣ ಕನ್ನಡ ಮತ್ತು ಅಭಯ ಆಶ್ರಯ ಅಸೈಗೋಳಿ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಡಾ. ಅಶೋಕ್ ಕುಮಾರ್ ಎಂ.ಎಸ್. ಇವರ ಸ್ಮರಣಾರ್ಥ ಅವರ ಪತ್ನಿ ಮಲ್ಲಿಕಾ ಅಶೋಕ ಅವರ ಸಹಕಾರದಲ್ಲಿ ನಡೆದ 263ನೇ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಅಂಧರ ಸೇವಾ ಸಂಘ ಸುಮಾರು 43 ವರ್ಷಗಳಿಂದ ನಿರಂತರವಾಗಿ ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿ ಈ ತನಕ 263 ಶಿಬಿರಗಳನ್ನು ಮಾಡಿದೆ. ಉಚಿತವಾಗಿ ಕನ್ನಡಕ, ಔಷಧಿ ಹಾಗೂ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ, ಜಾತಿ, ಮತ ಲಿಂಗಭೇದವಿಲ್ಲದೆ ಮಾಡಿದ ಸಮಾಜ ಸೇವೆಯ ಆತ್ಮ ತೃಪ್ತಿ ನಮಗಿದೆ ಎಂದರು.

ಮಾನವನ ಸಾವಿನ ನಂತರ ಕಣ್ಣುಗಳು ಸುಟ್ಟು ಬೂದಿಯಾಗಿ ಹೋಗುವ ಬದಲು ನೇತ್ರದಾನ ಮಾಡಿ, ಅಂಧರಿಗೆ ಬೆಳಕನ್ನು ನೀಡುವ ಮೂಲಕ ಜೀವನ ಸಾರ್ಥಕತೆಯನ್ನು ಪಡೆಯಬೇಕು. ನೇತ್ರದಾನದ ಬಗ್ಗೆ ಶಾಲೆ, ಕಾಲೇಜುಗಳಲ್ಲಿ ಹಾಗೂ ಸಂಘ ಸಂಸ್ಥೆಗಳು ಸಹಕರಿಸಿ ಪ್ರಚಾರ ಮಾಡಿ ಸಮಾಜದಲ್ಲಿ ಜಾಗೃತಿಯನ್ನು ಬಲಪಡಿಸಬೇಕು ಎಂದರು.

ನೇತ್ರ ತಜ್ಞ ಡಾ.ಜಯರಾಮ ಶೆಟ್ಟಿ ಮುಖ್ಯ ಅತಿಥಿಯಾಗಿ, ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಮಾಡಿ, ಶಿಬಿರ ಉದ್ಘಾಟಿಸಿದರು. ದೇಶದ ಪವಿತ್ರ ಸಂವಿಧಾನವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ವಾವೆಲ್ಲ ಸಹೋದರತೆಯಿಂದ ಜೀವನ ನಡೆಸಬೇಕು ಎಂದರು.

ಅಭಯ ಆಶ್ರಯದ ಕಾರ್ಯದರ್ಶಿ ಪ್ರಾಣ್ ಶ್ರೀನಾಥ್ ಹೆಗ್ಡೆ ಶುಭ ಹಾರೈಸಿದರು.

ಜೊತೆ ಕಾರ್ಯದರ್ಶಿ ರವಿ ರೈ ಪಜೀರ್ ಸ್ವಾಗತಿಸಿ, ವಂದಿಸಿದರು.

ಈ ಶಿಬಿರದಲ್ಲಿ ಸುಮಾರು 150 ಶಿಬಿರಾರ್ಥಿಗಳಿಗೆ ಉಚಿತವಾಗಿ ಕಣ್ಣು ಪರೀಕ್ಷೆಯನ್ನು ಮಾಡಿ ಅದರಲ್ಲಿ 75 ಕನ್ನಡಕ ಹಾಗೂ 34 ಜನರಿಗೆ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಗೆ ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆಗೆ ನೊಂದಾವಣೆ ಮಾಡಲಾಯಿತು.

ಅಂಧರ ಸೇವಾ ಸಂಘದ ಅಧ್ಯಕ್ಷ ವೈ.ಆರ್.ಭಟ್, ಜೊತೆಕಾರ್ಯದರ್ಶಿ ಪಿ. ಶೋಭಾ ರಾವ್, ಪಿ ಸುರೇಂದ್ರರಾವ್, ಅಂಬಾ ಕಾಮತ್, ಕ್ಷಮ, ಸ್ವರ್ಣಲತ ಭಟ್, ಸುರೇಶ್, ಮಲ್ಲಿಕಾ ಅಶೋಕನವರ ಕುಟುಂಬಸ್ಥರು, ಮೈಕಲ್ ಡಿಸೋಜ, ವಿದ್ಯಾ ಕಾಮತ್, ಅಭಯ ಆಶ್ರಯದ ಪದಾಧಿಕಾರಿಗಳಾದ ಹೇಮಮಾಲಿನಿ ಹೆಗ್ಡೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net