

ಮಂಗಳೂರು: ಕಾರ್ಗಿಲ್ ಯುದ್ಧವೇ ಅಲ್ಲ, ಅದೊಂದು ಆಪರೇಷನ್ ವಿಜಯ್ ಕಾರ್ಯಚರಣೆ, ಯುದ್ಧ ಎಂದಾದರೆ ಅದು 86 ದಿವಸ ನಡೆಯುವ ಅಗತ್ಯವಿರಲಿಲ್ಲ, ಪಾಕಿಸ್ತಾನ ಒಡೆದುರುಳಿಸಲು ಕೇವಲ 8 ದಿವಸ ಸಾಕು ಎಂದು ನಿವೃತ್ತ ಯೋಧ ಜೀವೇಂದ್ರ ಗಟ್ಟಿ ಹೇಳಿದರು.
ಯುವವಾಹಿನಿ ಮಂಗಳೂರು ಘಟಕದಲ್ಲಿ ಕಾರ್ಗಿಲ್ ವಿಜಯ್ ದಿವಸದ ರಜತ ಸಂಭ್ರಮದಲ್ಲಿ ಅವರು ಮಾತನಾಡಿದರು.
ಯೋಧರು ಯಾವತ್ತು ಸಾವಿಗೆ ಹೆದರುವುದಿಲ್ಲ. ಬೆಳಗ್ಗೆ ಕಾರ್ಯಚರಣೆ ಆರಂಭವಾದರೆ ಸಂಜೆ ಹಿಂದೆ ಬರುತ್ತೇವೆ ಎಂಬ ನಿರೀಕ್ಷೆಯು ಕೂಡ ಇರುವುದಿಲ್ಲ, ಕಾರ್ಗಿಲ್ ನಲ್ಲಿ ಸುಮಾರು 700ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದು, ಯಾರಿಗೂ ಕೂಡ ಬೆನ್ನಿಗೆ ಗುಂಡು ಬಿದ್ದಿಲ್ಲ. ಎದೆಗೆ ಗುಂಡು ಬಿದ್ದು ಹುತಾತ್ಮರಾದವರೇ ಹೆಚ್ಚು, ಯೋಧರು ವೀರ ಮರಣ ಬಯಸುವರೇ ಹೊರತು ಯಾವತ್ತು ಯುದ್ಧ ನಿಲ್ಲಿಸಲು ಒಪ್ಪುವುದಿಲ್ಲ ಎಂದರು.
ಸನ್ಮಾನ ಸ್ವೀಕರಿಸಿದ ಇನ್ನೊಬ್ಬ ಯೋಧ ಮೋಹನ್ ಸಾಲ್ಯಾನ್ ಮಾತನಾಡಿ, ನನಗೆ 17 ವರ್ಷಗಳ ಕಾಲ ಸೇನೆಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ವಿಷಯ, ಅದ್ದರಿಂದ ಇಂದು ಪೋಲಿಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇಂದು ಭಾರತದ ಸೇನೆಯು ವಿಶ್ವದಲ್ಲೇ 4 ನೇ ಸ್ಥಾನದಲ್ಲಿದೆ ಎಂದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ.ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು, ಮಂಗಳೂರು ಘಟಕದ ಅಧ್ಯಕ್ಷ ನಾಗೇಶ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀಕಲಾ ಶಶಿಂದ್ರ ಹಾಗೂ ಹರೀಶ್ ಕೆ. ಸುವರ್ಣ ಸನ್ಮಾನ ಪತ್ರ ವಾಚಿಸಿದರು. ಸಮಾಜ ಸೇವಾ ನಿರ್ದೇಶಕ ಜೈದೀಪ್ ಟಿ.ಅಮೀನ್ ಸ್ವಾಗತಿಸಿದರು, ಕಾರ್ಯದರ್ಶಿ ಶ್ರವಣ್ ಎಸ್. ಕೂಳೂರು ವಂದಿಸಿದರು. ಸತೀಶ್.ಕೆ ಕಾರ್ಯಕ್ರಮ ನಿರೂಪಿಸಿದರು.