ಯಕ್ಷಾಂಗಣದಿಂದ ಎ.ಕೆ.ನಾರಾಯಣ ಶೆಟ್ಟಿ, ಮಹಾಬಲ ಶೆಟ್ಟಿ ಸಂಸ್ಮರಣೆ - ವಕ್ವಾಡಿ ಸನ್ಮಾನ ಯಕ್ಷಗಾನ ಮತ್ತು ನಾಟಕ ನಮ್ಮ ಸಂಸ್ಕೃತಿಯ ಉಸಿರು ಶ್ರೀ ಮಹಾಬಲೇಶ್ವರ ಸ್ವಾಮೀಜಿ ನುಡಿ

mng--26 Nov Yakshangana
Published on

ಮಂಗಳೂರು: ‘ಕರಾವಳಿ ಜಿಲ್ಲೆಗಳಲ್ಲಿ ಯಕ್ಷಗಾನ ಮತ್ತು ನಾಟಕಗಳು ಜನ ಜೀವನದಲ್ಲಿ ಹಾಸುಹೊಕ್ಕಾಗಿವೆ. ಇವೆರಡೂ ನಮ್ಮ ಸಂಸ್ಕೃತಿಯ ಉಸಿರು. ಮಠ - ಮಂದಿರ ಮತ್ತು ಸಂಘ ಸಂಸ್ಥೆಗಳು ಅವುಗಳಿಗೆ ಇನ್ನಷ್ಟೂ ಪೋಷಣೆ ನೀಡುವ ಅಗತ್ಯವಿದೆ’ ಎಂದು ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಯಕ್ಷಾಂಗಣ ಮಂಗಳೂರು ಚಿಂತನ - ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ವತಿಯಿಂದ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ - 2024’ 12ನೇ ವರ್ಷದ ನುಡಿ ಹಬ್ಬದಲ್ಲಿ ಕೀರ್ತಿ ಶೇಷ ಅರ್ಥಧಾರಿಗಳಾದ ದಿ.ಎ.ಕೆ.ನಾರಾಯಣ ಶೆಟ್ಟಿ ಫರಂಗಿಪೇಟೆ ಮತ್ತು ಎ.ಕೆ.ಮಹಾಬಲ ಶೆಟ್ಟಿ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಿ ಅವರು ಆಶೀರ್ವಚನ ನೀಡಿದರು.

ಉದ್ಯಮಿ ಎ.ಕೆ. ಜಯರಾಮ ಶೇಖ ಅವರು ಸಂಸ್ಮರಣಾ ನುಡಿಗಳನ್ನಾಡಿದರು.

ಯಕ್ಷಾಂಗಣದ ಹಿರಿಯ ಸದಸ್ಯ, ವಿಜಯಾ ಬ್ಯಾಂಕಿನ ನಿವೃತ್ತ ಪ್ರಬಂಧಕ ವಕ್ವಾಡಿ ಶೇಖರ ಶೆಟ್ಟಿ ಅವರನ್ನು ಸಪತ್ನಿಕರಾಗಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರನ್ನು ಅಭಿನಂದಿಸಿ ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿದರು. ಶೇಖರ ಶೆಟ್ಟರ ಧರ್ಮಪತ್ನಿ ವಸಂತಿ ಎಸ್. ಶೆಟ್ಟಿ ಜೊತೆಗಿದ್ದರು.

ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ರೋಟರಿ ಜಿಲ್ಲಾ ಮಾಜಿ ಗವರ್ನರ್ ಪ್ರಕಾಶ ಕಾರಂತ, ದ.ಕ. ಜಿಲ್ಲಾ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಜಯಶೀಲ ಅಡ್ಯಂತಾಯ ಮುಖ್ಯ ಅತಿಥಿಗಳಾಗಿದ್ದರು. ದಿ.ಎ.ಕೆ. ನಾರಾಯಣ ಶೆಟ್ಟರ ಧರ್ಮ ಪತ್ನಿ ಕಾವೇರಿ,ಅಳಿಯ ವಿಠಲ ರೈ, ಮಕ್ಕಳಾದ ಶ್ರೀನಾಥ ಶೆಟ್ಟಿ ಮತ್ತು ದಾಕ್ಷಾಯಿಣಿ ಉಪಸ್ಥಿತರಿದ್ದರು. ಯಕ್ಷಾಂಗಣದ ಪದಾಧಿಕಾರಿಗಳಾದ ಪಣಿಯೂರು ಕರುಣಾಕರ ಶೆಟ್ಟಿ, ನಿವೇದಿತಾ ಎನ್. ಶೆಟ್ಟಿ ಬೆಳ್ಳಿಪ್ಪಾಡಿ, ಸುಮಾ ಪ್ರಸಾದ್ ಇದ್ದರು.

ಯಕ್ಷಾಂಗಣ ಮಂಗಳೂರು ಉಪಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ ಸ್ವಾಗತಿಸಿದರು. ಸಂಚಾಲಕ ರವೀಂದ್ರರೈ ಕಲ್ಲಿಮಾರು ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net