ಮಂಗಳೂರು ವಿವಿ ಘಟಕ ಕಾಲೇಜುಗಳ ನೇಮಕಾತಿಯಲ್ಲಿ ಅಕ್ರಮ -ಎಸ್.ಆರ್. ಹರೀಶ್ ಆಚಾರ್ಯ ಆರೋಪ

hhhhhhhh
Published on



ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿಯು ಸ್ವಹಿತಾಸಕ್ತಿ ಮತ್ತು ಅಕ್ರಮಗಳಿಂದ ಕೂಡಿದೆ ಎಂದು ಮಾಜಿ ಸಿಂಡಿಕೇಟ್ ಸದಸ್ಯ ಎಸ್.ಆರ್.ಹರೀಶ್ ಆಚಾರ್ಯ ದೂರಿದ್ದಾರೆ.
ನೇಮಕಾತಿಗೆ ಅಧಿಸೂಚನೆ ಹೊರಡಿಸುವಾಗ ಮೂಲ ಅರ್ಹತೆ ಸ್ನಾತಕೋತ್ತರ ಪದವಿಯೊಂದಿಗೆ ಬೋಧನಾ ಅನುಭವ, ಭಾಷಾ ಕೌಶಲ್ಯ ಮತ್ತು ನೆಟ್ ಹಾಗೂ ಕೆಸೆಟ್ ವಿದ್ಯಾರ್ಹತೆ ಪರಿಗಣಿಸುವುದಾಗಿ ಸೂಚಿಸಲಾಗಿತ್ತು. ಆದರೆ ಈ ಎಲ್ಲ ಅರ್ಹತೆಗಳನ್ನು ಗಾಳಿಗೆ ತೂರಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಕಳೆದ 3-4 ವರ್ಷಗಳಿಂದ ಘಟಕ ಕಾಲೇಜುಗಳಲ್ಲಿ ಸೇವೆಯಲ್ಲಿದ್ದು ಬೋಧನಾ ಅನುಭವ ಇರುವ ಅನೇಕ ಅತಿಥಿ ಉಪನ್ಯಾಸಕರನ್ನು ವಿನಾ ಕಾರಣ ಕೈ ಬಿಡಲಾಗಿದೆ. ಇಂತಹ ಉಪನ್ಯಾಸಕರ ಜೀವನ ಅತಂತ್ರವಾಗಿದೆ. ನೇಮಕಾತಿ ಪ್ರಕ್ರಿಯೆಗೆ ಯಾವುದೇ ಪರಿನಿಯಮವನ್ನು ರಚಿಸದೆ ಪ್ರಭಾರ ಕುಲಪತಿಗಳು ತನ್ನ ಮೂಗಿನ ನೇರಕ್ಕೆ ನೇಮಕಾತಿ ಪ್ರಕ್ರಿಯೆ ನಡೆಸಿದ್ದಾರೆ. ಈ ಬಗ್ಗೆ ಘಟಕ ಕಾಲೇಜುಗಳ ಪ್ರಾಂಶುಪಾಲರ ಅಭಿಪ್ರಾಯಗಳಿಗೂ ಮಾನ್ಯತೆ ನೀಡಿರುವುದಿಲ್ಲ.ಘಟಕ ಕಾಲೇಜುಗಳ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸುವ ಬದಲಾಗಿ ಅದನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಅವರು ದೂರಿದ್ದಾರೆ.
ವಿಶ್ವವಿದ್ಯಾನಿಲಯದ ಆಡಳಿತಾಂಗವು ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡು ವಿದ್ಯಾರ್ಹತೆ ಮತ್ತು ಬೋಧನಾ ಅನುಭವ ಇದ್ದು ಅನ್ಯಾಯಕ್ಕೆ ಒಳಗಾದ ಅತಿಥಿ ಉಪನ್ಯಾಸಕರನ್ನು ಸೇವೆಗೆ ಮರು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಎಸ್.ಆರ್.ಹರೀಶ್ ಆಚಾರ್ಯ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net