

ಮಂಗಳೂರು: ತರುಣ ವೃಂದ ದಂಬೆಲ್ ಮತ್ತು ಮಹಿಳಾ ಮಂಡಲ ದಂಬೆಲ್ ಇದರ 50ನೇ ವರ್ಷದ ವಾರ್ಷಿಕೋತ್ಸವ ಸುವರ್ಣ ಸಂಭ್ರಮ ಜ.17 ರಿಂದ 19ರವರೆಗೆ ದಂಬೆಲ್ ವಠಾರದಲ್ಲಿ ನಡೆಯಲಿದೆ.
1975ರಲ್ಲಿ ಉದ್ಘಾಟನೆಗೊಂಡು ಸಂತ ಶ್ರೇಷ್ಠರ ಆದರ್ಶ ಚಿಂತನೆಗಳನ್ನು ಸಮಾಜಕ್ಕೆ ದಾರೆಯೆರೆಯುವ ನಿಟ್ಟಿನಲ್ಲಿ 50ವರ್ಷಗಳಲ್ಲಿ ನೂರಾರು ಅರ್ಥಪೂರ್ಣ ಕಾರ್ಯಕ್ರಮಗಳು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು ನಡೆದಿದೆ. ಮೊದಲನೇ ದಿನವಾದ ಜ.17 ರಿಂದ ಸಂಜೆ 5 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ಹಾಗೂ 7 ಗಂಟೆಗೆ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.19 ರಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಮಟ್ಟದ ಕುಣಿತ ಭಜನಾ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಸಹಿತ ಗಣ್ಯರು ಉದ್ಘಾಟಿಸಲಿದ್ದಾರೆ. ಸಂಜೆ 7 ಗಂಟೆಗೆ ಅಂಗನವಾಡಿಯ ಹೊಸ ಕಟ್ಟಡ ಹಾಗೂ ಸಭಾ ಕಾರ್ಯಕ್ರಮವನ್ನು ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಮೇಯರ್ ಮನೋಜ್ ಕುಮಾರ್ ಹಾಗೂ ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ಸುರಕ್ಷಾ ಅಧಿಕಾರಿ, ಪೌರ ಕಾರ್ಮಿಕರಿಗೆ, ವಾಲ್ ಮ್ಯಾನ್, ಆಶಾಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ,ದಾರಿ ದೀಪ ದುರಸ್ತಿ ಮಾಡುವ ಸಿಬಂದಿಗೆ ಸನ್ಮಾನ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ವೀಲ್ ಚಯರ್ ವಿತರಣೆ, ಅಂಗನವಾಡಿ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ನಡೆಯಲಿದೆ ಹಾಗೂ ಡಾ. ದೇವದಾಸ್ ಕಾಪಿಕಾಡ್ ಅವರ ತುಳು ಹಾಸ್ಯಮಯ ನಾಟಕ ನಡೆಯಲಿದೆ. ಸಂಸ್ಥೆಯ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷತೆಯನ್ನು ವಾರ್ಡಿನ ಮನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್ ವಹಿಸಲಿದ್ದಾರೆ ಎಂದರು.
ಪ್ರಮುಖರಾದ ಸದಾನಂದ ಅಂಚನ್, ವಿವೇಕ್ ಸುವರ್ಣ, ಬಾಲಕೃಷ್ಣ ಶೆಟ್ಟಿ, ಕಿಶೋರ್ ಕುಮಾರ್, ನವನೀತ್ ಕೋಟ್ಯಾನ್, ಮೀನಾಕ್ಷಿ ಇದ್ದರು.