

ಮಂಗಳೂರು: ಭಾರತ ದೇಶದ ಪ್ರತಿಯೊಬ್ಬ ಪ್ರಜೆಯೂ ಅರ್ಥೈಸಿಕೊಂಡು ಕಲೆಗೆ ಗೌರವವನ್ನು ಕೊಡುವುದು ಆದ್ಯ ಕರ್ತವ್ಯ ಎಂದು ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿ ನುಡಿದರು.
ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಸಂಸ್ಥೆಗೆ ನಲವತ್ತು ವರ್ಷ ತುಂಬಿದ ಸಲುವಾಗಿ ಸುರತ್ಕಲ್ ವಿದ್ಯಾದಾಯಿನಿ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜರುಗಿದ ನಲವತ್ತರ ನಲಿವು ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ನಾಟ್ಯ ಗುರು ಉಳ್ಳಾಲ ಮೋಹನ ಕುಮಾರ್ ಜ್ಯೋತಿ ಪ್ರಜ್ವಲನೆ ಮಾಡಿದರು. ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಐ. ರಮಾನಂದ ಭಟ್ಟರು ಶುಭ ಹಾರೈಸಿದರು. ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಶ್ರೀಪತಿ ಭಟ್, ಸಂಗೀತ ವಿದ್ವಾನ್ ಗುರು ಎಂ. ನಾರಾಯಣ್, ಗೋಪಿಕಾ ಸತೀಶ ಮಯ್ಯ, ಸುಧಾಕರ ಪೇಜಾವರ್ ಉಪಸ್ಥಿತರಿದ್ದರು.
ನಾಟ್ಯಾಂಜಲಿ ಸಂಸ್ಥೆಯ ಆರಂಭದ ಸಮಯದಲ್ಲಿ ಸಹಕಾರ ನೀಡಿದ ಎಚ್. ಯು. ಅನಂತಯ್ಯ, ಎಸ್. ಸುಬ್ರಾಯ ಹಾಲಂಬಿ ಕುಂದಾಪುರ, ವೆಂಕಟರಮಣ ಐತಾಳ್ ಕೋಟೇಶ್ವರ, ಪಿ.ಪುರುಷೋತ್ತಮ ರಾವ್ ಕೃಷ್ಣಾಪುರ, ತಿರುಮಲೇಶ್ವರ ಭಟ್ ಕಲ್ಲಡ್ಕ , ಸರ್ವೋತ್ತಮ ಅಂಚನ್ ಮುಲ್ಕಿ , ಪಿ. ಸುಧಾಕರ ಬೈಂದೂರು, ಪೂರ್ಣಿಮಾ ಸಿ. ಕದ್ರಿ ಅವರನ್ನು ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ. ಚಂದ್ರಶೇಖರ ನಾವಡ ಇವರ ನಿರ್ದೇಶನದಲ್ಲಿ ರಸ ಗಣಪತಿ ಎಂಬ ಶಾಸ್ತ್ರೀಯ ನೃತ್ಯ ಸಂಪದವು ಸಂಸ್ಥೆಯ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳಿಂದ ಜರಗಿತು. ಹಿಮ್ಮೇಳ ಕಲಾವಿದರಾಗಿ ಪವಿತ್ರ ವಿನಯ್, ಬಾಲಚಂದ್ರ ಭಾಗವತ್, ಶ್ರಧರ್ ಆಚಾರ್ಯ ಪಾಡಿಗಾರ್ ಸಹಕರಿಸಿದರು. ದಾಮೋದರ ಶರ್ಮ ನಿರೂಪಿಸಿದರು. ವಿದ್ವಾನ್ ಕೆ. ಚಂದ್ರಶೇಖರ ನಾವಡ ವಂದಿಸಿದರು.