ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮನೆಗೆ ಕಲ್ಲು ತೂರಾಟ

FIR-2
Published on

ಮಂಗಳೂರು: ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ವೆಲೆನ್ಸಿಯಾದ ಮನೆಗೆ ಬುಧವಾರ ರಾತ್ರಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಲ್ಲೆಸೆದು ಪರಾರಿಯಾಗಿದ್ದಾರೆ.


ಘಟನೆ ಸಂದರ್ಭ ಐವನ್ ಅವರು ಬೆಂಗಳೂರಿನಲ್ಲಿದ್ದರು. ಕಲ್ಲು ಕಿಟಕಿಯ ಫ್ರೇಮ್‌ಗೆ ಬಿದ್ದ ಕಾರಣ ಯಾವುದೇ ಹಾನಿ ಉಂಟಾಗಿಲ್ಲ. ಪಾಂಡೇಶ್ವರ ಪೊಲೀಸರ ತಕ್ಷಣ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಪರಿಸರದ ಸಿಸಿಟಿವಿ ಪರಿಶೀಲನೆ ನಡೆಸಿ, ದುಷ್ಕರ್ಮಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಡಿಸಿಪಿ ಸಿದ್ದಾರ್ಥ್ ಗೋಯಲ್, ಕೇಂದ್ರ ಉಪವಿಭಾಗದ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಹಾಗೂ ಪಾಂಡೇಶ್ವರ ಇನ್‌ಸ್ಪೆಕ್ಟರ್ ಗುರುರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐವನ್ ಡಿಸೋಜ ಹಾಗೂ ಅವರ ಕುಟುಂಬಸ್ಥರ ರಕ್ಷಣೆಗೆ ಅವರ ಮನೆಗೆ ದಿನದ 24 ಗಂಟೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.


ವಿಶೇಷ ತಂಡ ರಚನೆ: ಆರೋಪಿಗಳ ಪತ್ತೆಗೆ ಸೆಂಟ್ರಲ್ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಪಾಂಡೇಶ್ವರ ಇನ್‌ಸ್ಪೆಕ್ಟರ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ತಂಡ ಸ್ಥಳೀಯ ಅಂಗಡಿ ಹಾಗೂ ಕಟ್ಟಡಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಕಲೆ ಹಾಕಿದ್ದಾರೆ. ಸಾರ್ವಜನಿಕರು ಯಾವುದೇ ಮಾಹಿತಿ ಇದ್ದರೆ ಪೊಲೀಸರಿಗೆ ನೀಡುವಂತೆ ತಿಳಿಸಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆ ಮಾಡುವುದಾಗಿ ಹೇಳಿದ್ದಾರೆ.


ಆ.19ರಂದು ಲಾಲ್‌ಭಾಗ್‌ನಲ್ಲಿ ನಡೆದಿದ್ದ ಕಾಂಗ್ರೆಸ್ ಪ್ರತಿಭಟನೆ ವೇಳೆ ರಾಜ್ಯಪಾಲರ ವಿರುದ್ಧ ಐವನ್ ಡಿಸೋಜ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆ ಬಳಿಕ ಅವರ ವಿರುದ್ಧ ಬರ್ಕೆ ಪೊಲೀಸ್ ಠಾಣೆ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಬಿಜೆಪಿ ಕಾರ್ಯಕರ್ತರು ದೂರು ನೀಡಿದ್ದರು. ಬುಧವಾರ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಠಾಣೆಗೆ ತೆರಳಿ ಐವನ್ ವಿರುದ್ಧ ಎಫ್‌ಐಆರ್ ದಾಖಲಿಸಲು ಗುರುವಾರದ ತನಕ ಗಡುವು ನೀಡಿದ್ದರು. ಇದರ ಬೆನ್ನಲ್ಲೇ ಐವನ್ ಮನೆಗೆ ಕಲ್ಲು ತೂರಾಟ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net