ಮಂಗಳೂರು : ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳು ವಿವಿಧ, ನಿಯತಕಾಲಿಕ ಶೈಕ್ಷಣಿಕ ಸ್ಪರ್ಧಾಕೂಟದಲ್ಲಿ ಪಾಲ್ಗೊಂಡು ತಮ್ಮ ಜ್ಞಾನವನ್ನು ವೃದ್ಧಿಸಿದರೆ ಭವಿಷ್ಯದ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು, ಶೈಕ್ಷಣಿಕ ಸ್ಪರ್ಧಾಕೂಟದಲ್ಲಿ ಸೋಲು, ಗೆಲವು ದ್ವಿತೀಯ ಉದ್ದೇಶವಾಗಿರಬೇಕು ಎಂದು ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು ಸಲಹೆ ನೀಡಿದರು.
ಅವರು ನಗರದ ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ವೈದ್ಯಕೀಯ ಶಾಸ್ತ್ರ ವಿಭಾಗದ ಪದವಿ ಪೂರ್ವ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗಾಗಿ ಶನಿವಾರ ನಡೆದ 4ನೇ ವಾರ್ಷಿಕ ರಾಜ್ಯ ಮಟ್ಟದ ಅಂತರ ವೈದ್ಯಕೀಯ ಕಾಲೇಜು ರಸ ಪ್ರಶ್ನೆ ಸ್ಪರ್ಧಾಕೂಟ ಕಿಮ್ಸ್ ಯು.ಜಿ.ಮೆಡಿಕ್ವಿಜ್ – 2024ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಣಿಪಾಲ ವೈದ್ಯಕೀಯ ಕಾಲೇಜನ್ನು ಪ್ರತಿನಿಧಿಸಿದ ರಾಘವ ಮತ್ತು ಅನಿರುದ್ದ ರಾವ್ ಜೋಡಿ ತಂಡವು ಪ್ರಥಮ ಸ್ಥಾನ ಗಳಿಸಿ ಪ್ರತಿಷ್ಠಿ ಕಿಮ್ಸ್ ಯು.ಜಿ.ಮೆಡಿಕ್ವಿಜ್ – 2024 ಪ್ರಶಸ್ತಿ ಪಡೆಯಿತು. ಕೆ.ಎಂ.ಸಿ. ಮಣಿಪಾಲ ಕಾಲೇಜನ್ನು ಪ್ರತಿನಿಧಿಸಿದ ಸಿದ್ಧಾರ್ಥನಂದ ಮತ್ತು ಆದರ್ಶ ಜೋಡಿ ತಂಡವು ದ್ವಿತೀಯ ಸ್ಥಾನ ಗಳಿಸಿತು.
ಕಣಚೂರು ವೈದ್ಯಕೀಯ ಕಾಲೇಜಿನ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು ರವರು ಸ್ಪರ್ಧಾ ವಿಜೇತರ ಸಾಧನೆಯನ್ನು ಪ್ರಶಂಶಿಸಿ ಆಕರ್ಷಕ ಪ್ರಶಸ್ತಿ ಹಾಗೂ ಪ್ರಶಸ್ತಿ ಪ್ರಮಾಣ ಪತ್ರವನ್ನು ಪ್ರದಾನ ಮಾಡಿ ಅಭಿನಂದಿಸಿದರು. ಪ್ರಾಂಶುಪಾಲ ಪ್ರೋ.ಶಹನವಾಜ್ ಮಾಣಿಪ್ಪಾಡಿ, ಮುಖ್ಯ ಆಡಳಿತ ಅಧಿಕಾರಿ ಡಾ.ರೋಹನ್ ಮೋನಿಸ್, ಕಣಚೂರು ವೈದ್ಯಕೀಯ ಸಲಹಾ ಸಮಿತಿಯ ಅಧ್ಯಕ್ಷರಾದ, ಪ್ರೋ. ಮೊಹಮ್ಮದ್ ಇಸ್ಮಾಯಿಲ್ ಮತ್ತು ಸದಸ್ಯರಾದ ಪ್ರೋ.ಎಂ.ವಿ. ಪ್ರಭು ಉಪಸ್ಥಿತರಿದ್ದರು.
ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋ. ಡಾ. ದೇವದಾಸ್ ರೈ ಸ್ಪರ್ಧಾಕೂಟವನ್ನು ನಿರೂಪಿಸಿದ್ದರು. ಅವಿಭಾಜಿತ ದ.ಕ. ಜಿಲ್ಲೆಯ ವಿವಿಧ ವೈದ್ಯಕೀಯ ಶಿಕ್ಷಣ ಕಾಲೇಜಿನ 60 ತಂಡಗಳು ನಿರ್ಣಾಯಕ ಮತ್ತು ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದವು.
ಡಾ. ದೇವದಾಸ್ ರೈ ಸ್ವಾಗತಿಸಿದರು. ಡಾ.ಸನಿನ್ ವಂದಿಸಿದರು. ಡಾ.ಪ್ರೀತಮ್ ಈ ಸ್ಪರ್ಧಾ ಕೂಟವನ್ನು ಸಂಘಟಿಸಿದ್ದರು. ಎಂ.ವಿ. ಮಲ್ಯ ಬಹುಮಾನಗಳನ್ನು ಪ್ರಾಯೋಜಿಸಿದ್ದರು.