

ಮಂಗಳೂರು: ಎಸ್ಸೆಸೆಲ್ಸಿ ಪರೀಕ್ಷೆ ಮಾ.21ರಿಂದ ಆರಂಭಗೊಳ್ಳಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 521 ಶಾಲೆಗಳ 28,446 ಶಾಲಾ ಹೊಸ ವಿದ್ಯಾರ್ಥಿಗಳು ಸೇರಿದಂತೆ 29,753 ಅಭ್ಯರ್ಥಿಗಳು ನೊಂದಾವಣೆ ಮಾಡಿಕೊಂಡಿದ್ದಾರೆ.
831 ಖಾಸಗಿ ಹೊಸ ಅಭ್ಯರ್ಥಿಗಳು, 259 ಶಾಲಾ ಪುನರಾವರ್ತಿತ ಹಾಗೂ 217 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ನೊಂದಾವಣೆ ಮಾಡಿಕೊಂಡಿದ್ದಾರೆ. ಒಟ್ಟು 92 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.
ಬಂಟ್ವಾಳದಲ್ಲಿ 6007, ಬೆಳ್ತಂಗಡಿ 4204, ಮಂಗಳೂರು ಉತ್ತರ 5442, ಮಂಗಳೂರು ದಕ್ಷಿಣ 5176, ಮೂಡುಬಿದಿರೆ 2006, ಪುತ್ತೂರು 4926, ಸುಳ್ಯ 1992 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
92 ಪರೀಕ್ಷಾ ಕೇಂದ್ರಗಳು
ಬಂಟ್ವಾಳ 18, ಬೆಳ್ತಂಗಡಿ 13, ಮಂಗಳೂರು ಉತ್ತರ 18, ಮಂಗಳೂರು ದಕ್ಷಿಣ 18, ಮೂಡುಬಿದಿರೆ 5, ಪುತ್ತೂರು 14, ಸುಳ್ಯ 6 ಸೇರಿದಂತೆ ಒಟ್ಟು 92 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ.
ಅಧಿಕಾರಿ-ಸಿಬ್ಬಂದಿ: 92 ಪರೀಕ್ಷಾ ಕೇಂದ್ರ ಮುಖ್ಯಸ್ಥರು, 29 ಹೆಚ್ಚುವರಿ ಮುಖ್ಯಸ್ಥರು, 92 ಕಸ್ಟೋಡಿಯನ್ಸ್, 92 ಸಿಟ್ಟಿಂಗ್ ಸ್ಕ್ವಾಡ್ಸ್, 1332 ಕೊಠಡಿ ಮೇಲ್ವಿಚಾರಕರು, 92 ಕಚೇರಿ ಸಿಬ್ಬಂದಿ, 236 ಡಿ ದರ್ಜೆ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.
ಪರೀಕ್ಷೆ ಟೆನ್ಷನ್ ಬೇಡ
ವಿದ್ಯಾರ್ಥಿಗಳು ಪರೀಕ್ಷಾ ಭಯ ಹೊಂದದೆ ನಿರ್ಮಲ ಮನಸ್ಸಿನಿಂದ ಪರೀಕ್ಷೆ ಬರೆಯಬೇಕು. ವಿಚಲಿತರಾಗಿ ಮನೆ ಬಿಟ್ಟು ಹೋಗುವುದು, ಜೀವಕ್ಕೆ ಅಪಾಯ ತಂದೊಡ್ಡಿಕೊಳ್ಳುವುದು ಮಾಡಬಾರದು. ನಿರೀಕ್ಷಿತ ಫಲಿತಾಂಶ ಬರದಿದ್ದರೆ ಮುಂದಿನ ಮರು ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಅವಕಾಶವಿದೆ. ಪರೀಕ್ಷಾ ಸಂದರ್ಭದಲ್ಲಿ ಹೆತ್ತವರು ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಅವರ ಮೇಲೆ ಒತ್ತಡ ಹೇರದೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಇತ್ತೀಚೆಗೆ ಹಲವು ವಿದ್ಯಾರ್ಥಿಗಳು ಮನೆ ಬಿಟ್ಟು ಹೋಗಿರುವುದು, ಆತ್ಮಹತ್ಯೆ ಮಾಡಿರುವ ಘಟನೆಗಳು ನಡೆದಿದೆ. ಎಲ್ಲರೂ ಗಂಭೀರವಾಗಿ ಪರಿಗಣಿಸುವುದು ಅತ್ಯವಶ್ಯವಾಗಿದೆ.
ಜಿಲ್ಲೆಯ 92 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಿ, ವೆಬ್ ಕಾಸ್ಟಿಂಗ್ ಟ್ರಯಲ್ ಮಾಡಲಾಗಿದೆ. ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಹಾಗೂ ಪರೀಕ್ಷಾ ಮಂಡಳಿ ನಿರ್ದೇಶನದಂತೆ ಪರೀಕ್ಷಾ ಕೇಂದ್ರಗಳ ವೇಬ್‌ಕಾಸ್ಟಿಂಗ್ ಪರಿಶೀಲನೆಗೆ ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಲಕ್ಷ್ಮೀ ನಾರಾಯಣ
ಎಸ್ಸೆಸೆಲ್ಸಿ ಪರೀಕ್ಷೆ ನೋಡೆಲ್ ಅಧಿಕಾರಿ