ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಕೃಷ್ಣಮಯ ಜಿಲ್ಲಾ ಮಟ್ಟದ ಕೃಷ್ಣ ವೇಷ ಸ್ಪರ್ಧೆ

mng--17 Aug shakthi krishna
Published on

ಮಂಗಳೂರು: ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶಕ್ತಿನಗರ ಮತ್ತು ಶಕ್ತಿ ವಿದ್ಯಾಸಂಸ್ಥೆ ಶಕ್ತಿನಗರ ಇದರ ಸಹಯೋಗದಲ್ಲಿ ಶನಿವಾರ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ‘ಕೃಷ್ಣಮಯ’ ಜಿಲ್ಲಾ ಮಟ್ಟದ ಕೃಷ್ಣ ವೇಷ ಸ್ಪರ್ಧಾ ಕೂಟವನ್ನು ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಉದ್ಘಾಟಿಸಿದರು.


ಮಕ್ಕಳು ನಾಲ್ಕು ಗೋಡೆಯ ಒಳಗೆ ಕಲಿಯುವ ವಿಷಯಕ್ಕಿಂತ ಹೆಚ್ಚಾಗಿ ಸಹಪಾಠಿಗಳಿಂದ ಕಲಿಯುತ್ತಾರೆ. ಅದರ ಮಹತ್ವವು ಭವಿಷ್ಯದಲ್ಲಿ ಅವರಿಗೆ ಅರಿವಾಗುತ್ತದೆ. ಭಗವದ್ಗೀತೆಯ ಪ್ರತಿಯೊಂದು ಸಾಲು ಮನುಷ್ಯನ ಗತಿಯನ್ನು ಬದಲಿಸುತ್ತದೆ. ಗೀತೆಯ ಮೌಲ್ಯಗಳನ್ನು ನಾವು ನಮ್ಮ ಜೀವನದಲ್ಲಿ ರೂಢಿಸಿಕೊಂಡು ನಡೆಯಬೇಕು ಎಂದರು.


ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ರವೀಂದ್ರ ರೈ ಮುಖ್ಯ ಅತಿಥಿಯಾಗಿದ್ದರು. ಶಾಲೆಗಳು ಶಿಕ್ಷಣ ಕ್ಷೇತ್ರದ ದೇಗುಲವಿದ್ದಂತೆ, ಶಿಕ್ಷಣ ಕ್ಷೇತ್ರದಿಂದ ಮಾತ್ರವೇ ಸಮಾಜದ ಬದಲಾವಣೆ ಸಾಧ್ಯ. ಜಗತ್ತಿನಲ್ಲಿ ಇಲ್ಲದ ಸಂಸ್ಕಾರ ಮೌಲ್ಯಗಳು ನಮ್ಮ ಭಾರತದ ನೆಲದಲ್ಲಿದೆ. ಇಂತಹ ಭಾರತೀಯ ಸಂಸ್ಕಾರ ಮತ್ತು ಮೌಲ್ಯಗಳನ್ನು ಜಗತ್ತಿಗೆ ನೀಡುವುದೇ ನಿಜವಾದ ಶಿಕ್ಷಣದ ಉದ್ದೇಶವಾಗಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾಕ್, ಶುಭ ಹಾರೈಸಿದರು.
ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಹೆಚ್ ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿದ್ದರು.
ರಮೇಶ್ ಕೆ. ಅವರು ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ಶಿಕ್ಷಕ ಶರಣಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net