

ಮಂಗಳೂರು: ಹಿಮಾನಿ ಫಿಲಂಸ್ ಬ್ಯಾನರಿನಡಿ ನಿರ್ಮಾಣಗೊಂಡಿರುವ ಕರಾವಳಿಯ ಕಲಾವಿದರ ನಟಿಸಿರುವ ‘ಕಲ್ಜಿಗ’ ಕನ್ನಡ ಚಿತ್ರ ಸೆ.13ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಶೀರ್ಷಿಕೆಯಲ್ಲಿಯೇ ಕೌತುಕ ಬೆರೆತ ಸೆಳೆತವೊಂದನ್ನು ಬಚ್ಚಿಟ್ಟುಕೊಂಡಂತಿರುವ ಈ ಚಿತ್ರದ ಟ್ರೇಲರ್ ಎ2 ಫಿಲಂ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ ಜನರಿಂದ ಅದ್ಭುತ ಪ್ರತಿಕ್ರಿಯೆ ದೊರಕಿದೆ. ಈಗಾಗಲೇ ಕಲ್ಜಿಗ ಚಿತ್ರದ ಟ್ರೈಲರ್ ಅನ್ನು ಯೂಟ್ಯೂಬ್ ನಲ್ಲಿ ಒಟ್ಟು 14 ಲಕ್ಷಕ್ಕಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಎಂದು ನಿರ್ದೇಶಕ ಸುಮನ್ ಸುವರ್ಣ ಹೇಳಿದರು.
ನಾಯಕ ನಟ ಅರ್ಜುನ್ ಕಾಪಿಕಾಡ್ ಮಾತನಾಡಿ, ಬಿಡುಗಡೆಗೆ ಮುನ್ನ ಅಭಿಮಾನಿಗಳಿಗಾಗಿ ಪ್ರೀಮಿಯರ್ ಶೋಗಳನ್ನು ಏರ್ಪಡಿಸಲಾಗಿದೆ. ಸಿನಿಮಾ ನೋಡಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ನಮಗೆ ಉತ್ಸಾಹ ಹೆಚ್ಚಿದೆ. ಮುಂದಿನ ಶುಕ್ರವಾರ ಬಿಡುಗಡೆಯಾಗಲಿರುವ ಸಿನಿಮಾವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು.
ನಾಯಕಿ ನಟಿ ಸುಶ್ಮಿತಾ ಭಟ್ ಮಾತಾಡಿ, ಮೊದಲ ಬಾರಿ ನನ್ನ ನಿರ್ದೇಶಕರು ಬಂದು ಕಥೆ ಹೇಳಿದಾಗ ನನಗೆ ಕಥೆ ಕೇಳಿ ತುಂಬಾ ಖುಷಿಯಾಯಿತು. ಕೊರಗಜ್ಜ ಅನ್ನುವ ದೈವ ತುಳುನಾಡಿನಲ್ಲಿ ಮಾಡಿರುವ ಪವಾಡ ಕುರಿತು ತಿಳಿದುಕೊಂಡು ಈ ತಂಡವನ್ನು ಸೇರಿದೆ. ಚಿತ್ರೀಕರಣ ತುಂಬಾ ಚೆನ್ನಾಗಿ ನಡೆದು ಈಗ ಸಿನಿಮಾ ನೋಡಿದವರು ಹೇಳುವ ಮಾತುಗಳನ್ನು ಕೇಳಿ ಖುಷಿಯಾಗಿದೆ. ಎಲ್ಲರೂ ಸಿನಿಮಾ ನೋಡಿದಲ್ಲಿ ನಮ್ಮ ಶ್ರಮ ಸಾರ್ಥಕವಾಗಲಿದೆ ಎಂದರು.
ನಿರ್ಮಾಪಕ ಶರತ್ ಕುಮಾರ್ ಎ.ಕೆ. ಮಾತನಾಡಿ, ಕಲ್ಜಿಗ ಸಿನಿಮಾವನ್ನು ತುಂಬಾ ಪ್ರೀತಿಯಿಂದ ತಯಾರು ಮಾಡಿದ್ದೇವೆ. ತುಳುನಾಡಿನ ಜನರು, ಆಚಾರ ವಿಚಾರಗಳಿಂದ ಪ್ರೇರಣೆ ಪಡೆದು ಸಿನಿಮಾ ನಿರ್ಮಾಣ ಮಾಡಿದ್ದೇನೆ. ಸಿನಿಮಾ ನೋಡಿದ ಬಳಿಕ ಈ ಸಿನಿಮಾ ಗೆಲ್ಲುವ ಆತ್ಮವಿಶ್ವಾಸ ಹೆಚ್ಚಾಗಿದೆ. ನಾವು ಮಂಗಳೂರಿನಿಂದ ಸ್ಯಾಂಡಲ್ ವುಡ್ ಗೆ ಹೋಗುತ್ತಿದ್ದೇವೆ. ಎಲ್ಲರೂ ಪ್ರೋತ್ಸಾಹಿಸಿ ಎಂದರು.
ಚಿತ್ರದಲ್ಲಿ ಗೋಪಿನಾಥ್ ಭಟ್, ಜ್ಯೋತಿಷ್ ಶೆಟ್ಟಿ , ಮಾನಸಿ ಸುಧೀರ್ , ವಿಜಯ್ ಶೋಭರಾಜ್ ಪಾವೂರ್, ಶ್ಲಾಘ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸಾದ್ ಕೆ ಶೆಟ್ಟಿಯವರ ಹಿನ್ನೆಲೆ ಸಂಗೀತ ಚಿತ್ರದ ವೈಶಿಷ್ಟ್ಯ.
ಮಂಗಳೂರು, ಉಡುಪಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಡಿಕೇರಿ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಮುಂಬೈ ಹಾಗೂ ಗಲ್ಫ್ ದೇಶಗಳಲ್ಲಿ ಬಿಡುಗಡೆಯಾಗಲಿದೆ.
ಮಂಗಳೂರು ಸೀಮೆಯ ಕನ್ನಡ ಭಾಷಾ ಶೈಲಿಯಲ್ಲಿ ಚಿತ್ರ ತಯಾರಾಗಿದೆ. ಧರ್ಮದ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ನಂತರದಲ್ಲಿ ಘಟಿಸುವ ರೋಚಕ ಕಥನ ಕಲ್ಜಿಗದಲ್ಲಿದೆ. ಸಚಿನ್ ಶೆಟ್ಟಿ ಛಾಯಾಗ್ರಹಣ, ಯಶ್ವಿನ್ ಕೆ. ಶೆಟ್ಟಿಗಾರ್ ಸಂಕಲನ ಈ ಚಿತ್ರಕ್ಕಿದೆ. ಕಾಂತಾರ ಖ್ಯಾತಿಯ ಶನಿಲ್ ಗುರು ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ರಾಧಾಕೃಷ್ಣ ಮಾಣಿಲ , ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸಂದೀಪ್ ಶೆಟ್ಟಿ ‘ಕಲ್ಜಿಗಕ್ಕೆ ಕೈ ಜೋಡಿಸಿದ್ದಾರೆ. ಕಲ್ಜಿಗಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಕೂಡ ನಿರ್ದೇಶಕರೇ ಬರೆದಿದ್ದಾರೆ.