ಆ.23ರವರೆಗೆ ಸಂಸ್ಕೃತ ಭಾರತಿಯಿಂದ ಸಂಸ್ಕೃತ ಸಪ್ತಾಹ ಆಚರಣೆ

sams
Published on

ಮಂಗಳೂರು: ಸಂಸ್ಕೃತ ಭಾರತಿ ದಕ್ಷಿಣ ಪ್ರಾಂತ ಇದರ ವತಿಯಿಂದ ಪ್ರತಿವರ್ಷ ದೇಶಾದ್ಯಂತ ಸಂಸ್ಕೃತ ಸಪ್ತಾಹ ಹಮ್ಮಿಕೊಳ್ಳುತ್ತಿದ್ದು, ಈ ಬಾರಿಯು ಆ.16ರಿಂದ ಆ.23ರವರೆಗೆ ನಡೆಯುತ್ತಿದೆ ಎಂದು ಸಂಸ್ಕೃತ ಭಾರತಿ ದಕ್ಷಿಣ ಭಾರತ ಸಂಪರ್ಕ ಪ್ರಮುಖ್ ಸತ್ಯನಾರಾಯಣ ಕೆ.ವಿ. ಹೇಳಿದ್ದಾರೆ.


ಸಾಮಾನ್ಯ ಜನರಿಗೂ ಸಂಸ್ಕೃತವನ್ನು ಮಾತನಾಡಲು ಕಲಿಸುವ ಉದ್ದೇಶದಿಂದ ಈ ಸಪ್ತಾಹವನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ. ದೇಶ ವಿದೇಶಗಳಲ್ಲಿ ಸಂಸ್ಕೃತ ಭಾರತಿಯ ಸಂಘಟನಾತ್ಮಕವಾಗಿ ಒಂದು ವಾರಗಳ ಕಾಲ ಸಂಸ್ಕೃತ ಸಪ್ತಾಹವನ್ನು ಆಚರಿಸುತ್ತಾ ಬರುತ್ತಿದೆ ಎಂದವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಮಂಗಳೂರಿನಲ್ಲಿ ಕೂಡ ಆ.19ರಂದು ಸಂಸ್ಕೃತ ದಿನವನ್ನು ಆಚರಿಸಲಾಗುತ್ತಿದೆ. ಅಂದು ಸಂಜೆ 5ರಿಂದ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್‌ಕಾಲೇಜಿನ ಸಹಭಾಗಿತ್ವದಲ್ಲಿ ಕಾಲೇಜಿನ ಸಭಾಂಗಣದಲ್ಲಿ ವೈದ್ಯರಿಗಾಗಿ ಸಂಸ್ಕೃತ ಸಮಾವೇಶ ಆಯೋಜಿಸಲಾಗಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಸಂಸ್ಕೃತ ಭಾರತಿಯ ಅಖಿಲಭಾರತ ಸಂಘಟನಾ ಮಂತ್ರಿ ದಿನೇಶ್ ಕಾಮತ್ ‘ಸಂಸ್ಕೃತ ಎ ಕನ್‌ಲ್ುಯೆನ್ಸ್ ಆ್ ಕಲ್ಚರ್ ಸೈಯನ್ಸ್ ಆ್ಯಂಡ್ ವಿಸ್ಡಂ’ ಎನ್ನುವ ವಿಚಾರದಲ್ಲಿ ವಿಷಯ ಮಂಡನೆ ಮಾಡಲಿದ್ದಾರೆ ಎಂದವರು ತಿಳಿಸಿದರು.


ಸಂಸ್ಕೃತ ಭಾರತಿಯು ಸ್ವಯಂ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರ ನಿಯಮಿತ ಕಾರ್ಯಯೋಜನೆ ಮತ್ತು ಸಮಾಲೋಚನೆಯಿಂದ ದೇಶದಲ್ಲಿ ಮಾತ್ರವಲ್ಲದೆ ಗಲ್ಫ್ ದೇಶಗಳನ್ನು ಒಳಗೊಂಡ 39ಕ್ಕೂ ಅಧಿಕ ದೇಶಗಳಲ್ಲಿ ತನ್ನ ಕೇಂದ್ರಗಳನ್ನು ಹೊಂದಿದೆ. ಸಂಸ್ಕೃತ ಬಾಷೆ ಮನೆ ಮನೆಗೆ ತಲುಪಬೇಕು ಎಂಬುದು ಆಶಯವಾಗಿದೆ ಎಂದು ಸತ್ಯನಾರಾಯಣ ಕೆ.ವಿ.ವಿವರಿಸಿದರು.
ಮಹಾನಗರ ಸಂಯೋಜಕಿ ಸಂಧ್ಯಾ ಕಾಮತ್, ಗೀತಾ ಪ್ರಮುಖ್ ಗಣಪತಿ ಪೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net