

ಶ್ರವಣ್ ಕುಮಾರ್ ನಾಳ ಮಂಗಳೂರು
ದ.ಕ.ಜಿಲ್ಲೆಯ ಕೇಂದ್ರಭಾಗದಲ್ಲಿ ಕಾರ್ಯನಿರ್ವಹಿಸುವ ಮಂಗಳೂರು ಆರ್ಟಿಒ ಕಚೇರಿ ಖಾಲಿ ಖಾಲಿ. ಪ್ರತಿ ತಿಂಗಳೂ ಎರಡು ಸಾವಿರದಷ್ಟು ದ್ವಿಚಕ್ರ ವಾಹನ, 900 ಚತುಷ್ಚಕ್ರ ವಾಹನಗಳ ನೋಂದಣಿ ಸಹಿತ ಹಲವಾರು ಸೇವೆ ನೀಡುತ್ತಿರುವ ಸಾರಿಗೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕ ಸೇವೆಗೆ ತೊಡಕಾಗಿದೆ.
ದ.ಕ.ಜಿಲ್ಲೆಯಲ್ಲಿ ಪುತ್ತೂರು, ಬಂಟ್ವಾಳ, ಮಂಗಳೂರು ಹಾಗೂ ಸುರತ್ಕಲ್ ಆರ್ಟಿಒ ವಿಭಾಗಗಳಿವೆ. ಮಂಗಳೂರು ಹಾಗೂ ಸುರತ್ಕಲ್ ಕಚೇರಿಗಳು ಒಂದೇ ಸೂರಿನಡಿ ಮಂಗಳೂರು ಕೇಂದ್ರಭಾಗದಲ್ಲೇ ಕಾರ್ಯನಿರ್ವಹಿಸುತ್ತಿವೆ. ಮಂಗಳೂರು ಆರ್ಟಿಒ ಕಚೇರಿ ಆರಂಭವಾದಾಗ ಮಂಜೂರಾಗಿದ್ದ 78 ಸಿಬ್ಬಂದಿ ಪೈಕಿ ಈಗ 13 (ಶೇ.16) ಮಂದಿ ಮಾತ್ರ ಕರ್ತವ್ಯದಲ್ಲಿದ್ದಾರೆ. ಆರು ಮಂದಿ ಪ್ರೊಬೇಷನರಿ, ಹೊರಗುತ್ತಿಗೆಯಲ್ಲೇ ಕಚೇರಿ ಕಾರ್ಯ ನಡೆಯುತ್ತಿದೆ.
ಹಲವು ವರ್ಷಗಳಿಂದ ಮಂಗಳೂರು ಸಾರಿಗೆ ಕಚೇರಿಯಲ್ಲಿ ಪೂರ್ಣಪ್ರಮಾಣದ ಆರ್ಟಿಒ ಇಲ್ಲ. ಬಹುತೇಕ ಸಂದರ್ಭ ದ.ಕ ಹಾಗೂ ಉಡುಪಿ ಆರ್ಟಿಒ ವಿಭಾಗಕ್ಕೆ ಒಬ್ಬರೇ ಕರ್ತವ್ಯದಲ್ಲಿರುತ್ತಾರೆ. ಹಲವು ಸಂದರ್ಭಗಳಲ್ಲಿ ಎಆರ್ಟಿಒಗೆ ಆರ್ಟಿಒ ಚಾರ್ಜ್. ಈಗಲೂ ಆರ್ಟಿಒ ಹುದ್ದೆ ಖಾಲಿಯೇ ಇದೆ. ಹೊಸಬರು ಬರುವ ತನಕ ಇವರೇ ಹುದ್ದೆ ನಿಭಾಯಿಸಲಿದ್ದಾರೆ. ಇಬ್ಬರು ಎಆರ್ಟಿಒಗಳಲ್ಲಿ ಒಬ್ಬರು ಮಾತ್ರ ಇದ್ದಾರೆ. ಅವರಿಗೆ ತಮ್ಮ ಜವಾಬ್ದಾರಿ ಜತೆ ಆರ್ಟಿಒ ಜವಾಬ್ದಾರಿಯೂ ಹೆಚ್ಚುವರಿಯಾಗಿ ನೀಡಲಾಗುತ್ತಿದೆ.
((((ಬಾಕ್ಸ್)))
ಆನ್ಲೈನ್ ಸೇವೆಯಿಂದ ಪರಿಹಾರ
ನಾಲ್ವರು ಸೀನಿಯರ್ ಇನ್ಸ್ಪೆಕ್ಟರ್ಗಳಲ್ಲಿ ಒಬ್ಬರು ಮತ್ತು 12 ಇನ್ಸ್ಪೆಕ್ಟರ್ಗಳಲ್ಲಿ ಒಬ್ಬರು ಮಾತ್ರ ಕರ್ತವ್ಯದಲ್ಲಿದ್ದಾರೆ. ಇಬ್ಬರಲ್ಲೇ ಕರ್ತವ್ಯ ನಿರ್ವಹಣೆ ಕಷ್ಟವಾಗುತ್ತಿದೆ. ಇಬ್ಬರು ಇನ್ಸ್ಪೆಕ್ಟರ್ಸ್ ಆಫ್ ಮೋಟಾರ್ ವೆಹಿಕಲ್(ಐಎಂಇ) ಪ್ರೊಬೇಷನರಿ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ. ಪ್ರಥಮದರ್ಜೆ ಕ್ಲರ್ಕ್ 13ರಲ್ಲಿ ನಾಲ್ವರು ಇದ್ದು, ಒಬ್ಬ ಪ್ರೊಬೇಷನರಿ ಸಿಬ್ಬಂದಿ ನೆರವಾಗುತ್ತಿದ್ದಾರೆ. ಅಕೌಂಟ್ ಸೂಪರಿಂಟೆಂಡೆಂಟ್ ಇರುವ ಒಂದು ಹುದ್ದೆಯೂ ಖಾಲಿ ಇದೆ. ದ್ವಿತೀಯ ದರ್ಜೆ ಸಿಬ್ಬಂದಿ- 33ರಲ್ಲಿ ಐವರು ಮಾತ್ರ ಇದ್ದಾರೆ. ಇದರಲ್ಲಿ ಇಬ್ಬರು ಪ್ರೊಬೇಷನರಿ ಕರ್ತವ್ಯದಲ್ಲಿದ್ದಾರೆ. ಗ್ರೂಪ್ ಡಿ ನೌಕರರು-5ರಲ್ಲಿ ಒಬ್ಬರು ಮಾತ್ರ ಇದ್ದಾರೆ. ಸೆಕ್ಯುರಿಟಿ, ರಾತ್ರಿ ಕಾವಲುಗಾರ- ಒಂದು ಹುದ್ದೆಯಲ್ಲಿ ಒಬ್ಬರೂ ಇಲ್ಲ. ಶಾರ್ಟ್ಹ್ಯಾಂಡ್- 1 ಸಿಬ್ಬಂದಿ, ವಾಚ್ಮನ್, ಖಜಾನೆ ಕಾವಲುಗಾರ-2 ಹುದ್ದೆಯೂ ಖಾಲಿ ಇದೆ. ವಾಹನ ಚಾಲಕರ ಮೂರು ಹುದ್ದೆಯೂ ಖಾಲಿಯಿದ್ದು, ಹೊರಗುತ್ತಿಗೆಯ ಚಾಲಕ ಹುದ್ದೆಯೂ ಖಾಲಿ ಇದೆ. ಕಂಪ್ಯೂಟರೀಕರಣ, ಆನ್ಲೈನ್ ಸೇವೆಗಳಿಂದ ಸಿಬ್ಬಂದಿ ಕೊರತೆಗೆ ಸ್ವಲ್ಪ ಪರಿಹಾರ ಸಿಕ್ಕಿದೆ.
ಆರ್ಟಿಒ ಕಚೇರಿಯಲ್ಲೇ ಕಾಯಂ ಲೈಸೆನ್ಸ್
ಸಾರ್ವಜನಿಕರು ಲರ್ನಿಂಗ್ ಡ್ರೈವಿಂಗ್ ಲೈಸನ್ಸ್ಗೆ ಆರ್ಟಿ ಕಚೇರಿಗೆ ಬರುವ ಅಗತ್ಯವಿಲ್ಲ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಅಲ್ಲಿಯೇ ಪರೀಕ್ಷೆ ಬರೆದು ಲೈಸನ್ಸ್ ಡೌನ್ಲೋಡ್ ಮಾಡಿಕೊಳ್ಳಬಹುದು. ಕಾಯಂ ಲೈಸನ್ಸ್ಗಾಗಿ ಮಾತ್ರ ಕಚೇರಿಗೆ ಬರಬೇಕು. ದೀಪಾವಳಿ, ನವರಾತ್ರಿ, ಹೊಸ ವರ್ಷ ಸಂದರ್ಭ ವಾಹನಗಳ ನೋಂದಣಿ ಹೆಚ್ಚುತ್ತದೆ. ಆಗ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕ ಸೇವೆಯೂ ವಿಳಂಬವಾಗುತ್ತದೆ. ಸದ್ಯ ಹೊರಗುತ್ತಿಗೆಯಲ್ಲಿ ಸಕಾಲ, ಎನ್ಐಸಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಸ್ಮಾರ್ಟ್ ಕಾರ್ಡ್ ಸಹಿತ ಇತರ ಕರ್ತವ್ಯದ ಹೊರೆ ನಿಭಾಯಿಸುತ್ತಿದ್ದಾರೆ.
((((ಕ್ವೋಟ್)))
ಮಂಗಳೂರು ಸಾರಿಗೆ ಕಚೇರಿಯ 78 ಸಿಬ್ಬಂದಿ ಪೈಕಿ, 13 ಮಂದಿ ಮಾತ್ರ ಕರ್ತವ್ಯದಲ್ಲಿದ್ದಾರೆ. ಆರು ಮಂದಿ ಪ್ರೊಬೇಷನರಿ, ಕೆಲವು ಮಂದಿ ಹೊರಗುತ್ತಿಗೆ ಸಿಬ್ಬಂದಿ ಮೂಲಕ ಕಷ್ಟದಿಂದ ಕೆಲಸ ನಡೆಯುತ್ತಿದೆ. ಸಿಬ್ಬಂದಿ ಕೊರತೆಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಅಲ್ಲಿಯವರೆಗೆ ಇದ್ದ ಸಿಬ್ಬಂದಿಯನ್ನು ಬಳಸಿ ಸಾರ್ವಜನಿಕ ಸೇವೆ ನೀಡಲಾಗುತ್ತಿದೆ.
ವಿಶ್ವನಾಥ್ ನಾಯಕ್, ಪ್ರಭಾರ ಆರ್ಟಿಒ, ಮಂಗಳೂರು