

ಮಂಗಳೂರು : ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯು ವಿಶ್ವದಲ್ಲಿ ಮಾನ್ಯತೆ ಪಡೆದ ಪ್ರಥಮ ಸ್ವಯಂಪ್ರೇರಿತ ಸೇವಾ ಸಂಸ್ಥೆಯಾಗಿದೆ. ವಿವಿಧ ದೇಶಗಳಲ್ಲಿ ಜನಪರ ಆರೋಗ್ಯ, ಶಿಕ್ಷಣ, ಆರ್ಥಿಕ ಮತ್ತು ಸಮಾಜದ ಮೂಲಭೂತ ಸೌಕರ್ಯಗಳಾದ ವಸತಿ, ಶುದ್ಧ ಕುಡಿಯುವ ನೀರು, ಶೌಚಗೃಹ ಮೊದಲಾದ ಸೇವಾ ಯೋಜನೆಗಳನ್ನು ಹಮ್ಮಿಕೊಂಡು ಸ್ನೇಹ, ಶಾಂತಿ, ಸೌಹಾರ್ದತೆಯ ಸಂದೇಶವನ್ನು ಸಾರುವ ಸಂಸ್ಥೆಯಾಗಿದೆ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್‌ರಾದ ಡಾ. ದೇವದಾಸ ರೈ ಹೇಳಿದರು.
ರೋಟರಿ ಮಂಗಳೂರು ದಕ್ಷಿಣ ಸಂಸ್ಥೆಯ ಶನಿವಾರ ನಗರದ ಹೋಟೆಲ್ ಮೋತಿಮಹಲ್ ಸಭಾಂಗಣದಲ್ಲಿ ಜರಗಿದ 2024-25 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮುಖ್ಯ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ, ಪದಗ್ರಹಣದ ವಿಧಿ-ವಿಧಾನಗಳನ್ನು ನೇರವೇರಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು.
ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಅಶೋಕ್ ಕುಮಾರ್ ಸಂಸ್ಥೆಯ ಪದಾಧಿಕಾರಿಗಳಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿ ಜಗದೀಶ ಶೆಟ್ಟಿ ಸಂಪಾದಕತ್ವದ ರೊಟಾರೋಸ್ ಗೃಹ ವಾರ್ತಾಪತ್ರಿಕೆಯನ್ನು ಬಿಡುಗಡೆಗೊಳಿಸಿ ತಮ್ಮ ಪೂರ್ಣ ಸಹಕಾರವನ್ನು ನೀಡುವ ಆಶ್ವಾಸನೆ ನೀಡಿದರು. ವಲಯಾಧಿಕಾರಿ ರಾಜೇಶ್ ಶೆಟ್ಟಿ ಸಂಸ್ಥೆಯು ರೋಟರಿ ಜಿಲ್ಲಾಮಟ್ಟದಲ್ಲಿ ಸ್ವರ್ಣ ಪ್ರಶಸ್ತಿಯನ್ನು ಪಡೆದುದನ್ನು ಶ್ಲಾಘಿಸಿದರು.
ನಿರ್ಗಮನ ಅಧ್ಯಕ್ಷ ಹರ್ಷಾಕರ್ ಸಾಲಿಯಾನ್ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ನಿತಿನ್ ರೈ ವಾರ್ಷಿಕ ವರದಿ ಮಂಡಿಸಿದರು. ನೂತನ ಅಧ್ಯಕ್ಷ ರಿತೇಶ್ ಶೆಟ್ಟಿ ಅವರು ತಮ್ಮ ಅಧಿಕಾರಾವಧಿಯಲ್ಲಿ ವಿವಿಧ ಯೋಜನೆಯನ್ನು ಹಮ್ಮಿಕೊಂಡ ಮಾಹಿತಿ ನೀಡಿ ಅದರ ಅನುಷ್ಠಾನಕ್ಕೆ ಸರ್ವಸದಸ್ಯರ ಸಹಕಾರ ಕೋರಿದರು.
ಸಾನ್ವಿ ಮತ್ತು ಮಾಸ್ಟರ್ ನಿವನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ನೂತನ ಕಾರ್ಯದರ್ಶಿ ನಿತಿನ್ ರೈ ವಂದಿಸಿದರು.
ಪದಾಧಿಕಾರಿಗಳ ವಿವರ: ಹರೀಶ್ ಅಡ್ಯಾರ್ (ಚುನಾಯಿತ ಅಧ್ಯಕ್ಷ), ಸೂರ್ಯಕಾಂತ್ ನಾಕ್ (ದಂಡಾಧಿಕಾರಿ), ನಿಖಿಲ್ ಸುವರ್ಣ (ಕೋಶಾಧಿಕಾರಿ), ನಿರ್ದೇಶಕರು: ಸುನಿಲ್ ಕೇಶವ್ (ಸಂಸ್ಥೆ ಸೇವೆ), ನಿತಿನ್ ಅತ್ತಾವರ್ (ಸಮಾಜ ಸೇವೆ), ನಂದಕಿಶೋರ್ (ವೃತ್ತಿಪರ ಸೇವೆ), ಜಯಪ್ರಕಾಶ್ ಶೆಟ್ಟಿ (ಅಂತಾರ‌್ರಾಷ್ಟ್ರೀಯ ಸೇವೆ), ಅಂಕಿತ್ ಕರ್ಕೇರ (ಯುವಜನ ಸೇವೆ).