ಅಪ್ರಾಪ್ತೆ ಅತ್ಯಾಚಾರಿಗೆ 20 ವರ್ಷ ಕಠಿಣ ಸಜೆ

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ಮಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಅಪರಾಧಿಗೆ 20 ವರ್ಷ ಕಠಿಣ ಸಜೆ ಮತ್ತು 50 ಸಾವಿರ ರು. ದಂಡ ವಿಧಿಸಿ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.


ತೆಂಕ ಎಡಪದವು ನಿವಾಸಿ ಪ್ರಕಾಶ್ (32) ಶಿಕ್ಷೆಗೀಡಾದ ಅಪರಾಧಿ. 2023ರ ಜ. 17ರಂದು ಬೆಳಗ್ಗೆ 10 ಗಂಟೆಗೆ ಸಂಬಂಧಿಯೇ ಆಗಿರುವ ಅಪರಾಧಿಯ ಮನೆಗೆ 14ರ ವಯಸ್ಸಿನ ಅಪ್ರಾಪ್ತ ಬಾಲಕಿ ತೆರಳಿದ್ದು, ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಬಾಲಕಿಯನ್ನು ಅಡುಗೆ ಮನೆಗೆ ಎಳೆದೊಯ್ದ ಪ್ರಕಾಶ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆಯೊಡ್ಡಿದ್ದ.


ಘಟನೆಯಿಂದ ನೊಂದ ಬಾಲಕಿ ತನ್ನ ಕೈಗಳನ್ನು ಬ್ಲೇಡ್‌ನಿಂದ ಕುಯ್ದುಕೊಂಡಿದ್ದು, ಈ ವೇಳೆ ಆಕೆಯ ಸಹೋದರಿ ವಿಚಾರಿಸಿದಾಗ ಅತ್ಯಾಚಾರ ಬಯಲಿಗೆ ಬಂದಿದೆ. ಬಳಿಕ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲಕಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಅಂದಿನ ಇನ್‌ಸ್ಪೆಕ್ಟರ್ ಲೋಕೇಶ್ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.


ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 13 ಸಾಕ್ಷಿದಾರರನ್ನು ವಿಚಾರಿಸಲಾಗಿತ್ತು. 16 ದಾಖಲೆಗಳನ್ನು ಗುರುತಿಸಲಾಗಿತ್ತು. ಈ ಪ್ರಕರಣದ ಸಾಕ್ಷೃ, ದಾಖಲೆಗಳು ಹಾಗೂ ಪೂರಕ ಸಾಕ್ಷೃ ಹಾಗೂ ವಾದ ಪ್ರತಿವಾದ ಆಲಿಸಿ ಆರೋಪಿತನ ವಿರುದ್ಧ ಅಪರಾಧವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಮಾನು ಕೆ. ಎಸ್. ಅವರು ಅಪರಾಧಿ ಪ್ರಕಾಶ್‌ಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.ದಂಡದ 50 ಸಾವಿರ ರೂ. ಹಣವನ್ನು ನೊಂದ ಬಾಲಕಿಗೆ ನೀಡುವಂತೆ ಆದೇಶಿಸಿದೆ. ಅಲ್ಲದೆ ಹೆಚ್ಚುವರಿಯಾಗಿ 2,50,000 ರು. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಬಾಲಕಿಗೆ ನೀಡುವಂತೆ ತೀರ್ಪಿನಲ್ಲಿ ನಿರ್ದೇಶನ ನೀಡಲಾಗಿದೆ. ಸರ್ಕಾರದ ಪರವಾಗಿ ಕೆ. ಬದರಿನಾಥ್ ನಾಯರಿ ವಾದ ಮಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net