

ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಆವೃತ್ತಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಅಭಿಯಾನ ಬುಧವಾರ ಮಂಗಳಾದೇವಿ ದೇವಸ್ಥಾನದ ಪರಿಸರದಲ್ಲಿ ನಡೆಯಿತು.
ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಅವರ ಉಪಸ್ಥಿತಿಯಲ್ಲಿ ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಅರುಣ್ ಐತಾಳ್, ಮಂಗಳಾ ಸಮೂಹ ಸಂಸ್ಥೆಗಳ ಪ್ರಾಂಶುಪಾಲ ಪ್ರತಿಜ್ಞಾ ಸುಹಾಸಿನಿ, ಪರಿಸರ ಪ್ರೇಮಿ ಅರ್ಜುನ್ ಮಸ್ಕರೇನಸ್ ಹಾಗೂ ಮಂಗಳಾದೇವಿ ಸೇವಾ ಸಮಿತಿಯ ಖಜಾಂಜಿ ವಿಶ್ವನಾಥ್ ಅವರು ಮಂಗಳಾದೇವಿ ದೇವಸ್ಥಾನದ ಮುಂಭಾಗ ಹಸಿರು ನಿಶಾನೆ ತೋರುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಗಣ್ಯರು ಸಾಂಕೇತಿಕವಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಈ ಸಂದರ್ಭದಲ್ಲಿ ಕ್ಯಾ.ಗಣೇಶ್ ಕಾರ್ಣಿಕ್, ಮಂಗಳಾದೇವಿ ಸೇವಾ ಸಮಿತಿಯ ಅಧ್ಯಕ್ಷ ದಿಲ್ ರಾಜ್ ಆಳ್ವ, ಕಾರ್ಯದರ್ಶಿಗಳಾದ ತಿಲಕ್ ರಾಜ್, ಕಮಲಾಕ್ಷ ಪೈ, ಸತ್ಯನಾರಾಯಣ ಕೆ. ವಿ., ಉಮಾನಾಥ್ ಕೋಟೆಕ್ಕಾರ್ ಮತ್ತು ರಂಜನ್ ಬೆಳ್ಳರ್ಪ್ಪಾಡಿ ಉಪಸ್ಥಿತರಿದ್ದರು.
ಸ್ವಯಂಸೇವಕರಾದ ದಾಮೋದರ್ ನಾಯಕ್, ಅವಿನಾಶ್ ಅಂಚನ್, ಅಚಲ್, ವಿಜೇಶ್ ದೇವಾಡಿಗ, ಬಾಲಕೃಷ್ಣ ಭಟ್, ಸಚಿನ್ ಶೆಟ್ಟಿ ನಲ್ಲೂರು, ಸಜಿತ್ ಕೆ ನೇತೃತ್ವದಲ್ಲಿ ಮಂಗಳಾ ಕಾಲೇಜ್ ಒಫ್ ನಸಿರ್ಂಗ್ ಆಂಡ್ ಅಲೈಡ್ ಹೆಲ್ತ್ ಸೈನ್ಸಸ್ ನ ರಾಷ್ಟೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಮಿಥುನ್ ವೇಣುಗೋಪಾಲ್, ಪ್ರಾಧ್ಯಾಪಕ ನವೀನ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ತಂಡ ಮಂಗಳಾದೇವಿ ರಥಬೀದಿಯ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಬಾಟಲಿಗಳು ಮುಂತಾದ ತ್ಯಾಜ್ಯಗಳನ್ನು ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸಿದರು. ಮಂಗಳಾದೇವಿ ಸೇವಾಸಮಿತಿಯ ಸದಸ್ಯರು, ಅಂಬಾ ಮಹೇಶ್ವರಿ ಸೇವಾಸಮಿತಿಯ ಸದಸ್ಯರು ಹಾಗೂ ರಾಮಕೃಷ್ಣ ಮಿಷನ್ನ ನಿವೇದಿತಾ ಬಳಗದ ಸದಸ್ಯರು ಕೈ ಜೋಡಿಸಿದರು.
ಸ್ವಯಂಸೇವಕರಾದ ಅಭಿಷೇಕ್ ವಿ., ಸುಧಾಕರ್, ಉದಯ್ ಕೆ. ಪಿ., ತಾರಾನಾಥ್ ಆಳ್ವ, ಸುನಂದಾ ಶಿವರಾಮ್, ಶಿವರಾಮ್ ನೇತೃತ್ವದಲ್ಲಿ ಎ. ಜೆ. ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಂಗಳಾದೇವಿಯಿಂದ ಪಾಂಡೇಶ್ವರ ಕಡೆಗೆ ತೆರಳುವ ರಸ್ತೆಯನ್ನು ಪೌರಕಾರ್ಮಿಕರ ಜೊತೆಗೂಡಿ ಸ್ವಚ್ಛಗೊಳಿಸಿದರು.
ಫಲ ವೃಕ್ಷಾರೋಪಣ ಅಭಿಯಾನ
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಹಾಗೂ ಸೇಂಟ್ ಅಲೋಶಿಯಸ್ ಸಂಸ್ಥೆಗಳ ಸಹಯೋಗದೊಂದಿಗೆ ಉಚಿತ ಹಣ್ಣಿನ ಸಸಿಗಳ ವಿತರಣಾ ಕಾರ್ಯಕ್ರಮ ಆಶ್ರಮದ ಆವರಣದಲ್ಲಿ ನಡೆಯಿತು. ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ, ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಅರುಣ್ ಐತಾಳ್, ಕ್ಯಾ. ಗಣೇಶ್ ಕಾರ್ಣಿಕ್ ಹಾಗೂ ಮಂಗಳೂರಿನ ಪರಿಸರ ಪ್ರೇಮಿ ಅರ್ಜುನ್ ಮಸ್ಕರೇನಸ್ ಹಣ್ಣಿನ ಸಸಿಗಳ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದರು. ಫಲ ವೃಕ್ಷಾರೋಪಣ ಅಭಿಯಾನವು, ಪಕ್ಷಿಗಳಿಗೆ ಮತ್ತು ಪ್ರಾಣಿಗಳಿಗೆ ಆಹಾರ ಒದಗಿಸುವುದರೊಂದಿಗೆ, ನಾಗರಿಕರನ್ನು ಪ್ರೇರೇಪಿಸಿ ಮಂಗಳೂರು ನಗರವನ್ನು ’ಹಣ್ಣುಗಳ ನಗರ’ವನ್ನಾಗಿಸುವ ಯೋಜನೆಯಾಗಿದೆ.
12 ತಿಂಗಳ ನಿರಂತರ ಸ್ವಚ್ಛತಾ ಯಜ್ಞ
2023 ರ ಅ. 2 ರಂದು ಸ್ವಚ್ಛಾಂಜಲಿ ಎಂಬ ಕಾರ್ಯಕ್ರಮದೊಂದಿಗೆ ಮಂಗಳೂರು ರಾಮಕೃಷ್ಣ ಮಠದ ಆವರಣದಲ್ಲಿ ಆರಂಭಗೊಂಡ ಎರಡನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನವು ನಿರಂತರವಾಗಿ ಹನ್ನೆರಡು ತಿಂಗಳುಗಳ ಕಾಲ ಜನಾಂದೋಲನವಾಗಿ ಪ್ರತಿ ತಿಂಗಳ ಎರಡನೇ ಭಾನುವಾರ ನಡೆಯಿತು.