ಒತ್ತುವರಿಯಾದ ವಕ್ಫ್ ಭೂಮಿ ಹಿಂಪಡೆದು ತನಿಖೆಗೆ ಆಗ್ರಹ

mng-nov20-rama sene
Published on

ಮಂಗಳೂರು: ರಾಜ್ಯದಲ್ಲಿ ಒತ್ತುವರಿಯಾದ 29 ಸಾವಿರ ಎಕರೆ ವಕ್ಫ್ ಭೂಮಿಯನ್ನು ಮತ್ತೆ ಹಿಂಪಡೆಯಬೇಕು. ಒತ್ತುವರಿ ಕುರಿತಂತೆ ಸಮಗ್ರ ತನಿಖೆ ನಡೆಸುವಂತೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮತ್ತು ರಾಜ್ಯ ಅಲ್ಪಸಂಖ್ಯಾತ ಆಯೋಗ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಗರದ ಆರ್ಯ ಸಮಾಜ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಣಿಪ್ಪಾಡಿ, ವಕ್ಫ್ ಆಸ್ತಿ ಒತ್ತುವರಿ ಕುರಿತ ಆಯೋಗದ ವರದಿಯನ್ನು ಮಂಡಿಸದೆ ಹಿಂದಿನ ಬಿಜೆಪಿ ಸರ್ಕಾರ ಒಳ್ಳೆಯ ಅವಕಾಶವನ್ನು ವೃಥಾ ಕೈಚೆಲ್ಲಿದೆ. ಹಣಬಲ, ತೋಳ್ಬಲ ಜೋರಾಗಿ ಇದ್ದುದರಿಂದ ಬಿಜೆಪಿ ಸರ್ಕಾರ ವರದಿಯನ್ನು ಜಾರಿಗೆ ತಂದಿಲ್ಲ. ಈಗ ಬಿಜೆಪಿ ವಕ್ಫ್ ವಿಚಾರದಲ್ಲಿ ಪ್ರತಿಭಟನೆ ನಡೆಸುತ್ತಿದೆ ಎಂದರು.

ಆಗಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಸೂಚನೆ ಮೇರೆಗೆ ವಕ್ಫ್ ಒತ್ತುವರಿ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗಿದೆ. ಒತ್ತುವರಿಯಾದ ಆಸ್ತಿಗಳನ್ನು ಹಿಂದು ಧಾರ್ಮಿಕ ಕೇಂದ್ರಗಳು, ರೈತರು ಒತ್ತುವರಿ ಮಾಡಿದ್ದಲ್ಲ, ಬದಲು ಕೆಲವು ರಾಜಕಾರಣಿಗಳು, ಅಲ್ಪಸಂಖ್ಯಾತರೇ ಒತ್ತುವರಿ ಮಾಡಿದ್ದಾರೆ. ಹಾಗಾಗಿ ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.

ಪ್ರಮೋದ್ ಮುತಾಲಿಕ್ ಮಾತನಾಡಿ, 2013ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ವಕ್ಫ್ ಬೋರ್ಡ್‌ಗೆ ಪರಮಾಧಿಕಾರ ನೀಡಿತು. ಅಲ್ಲಿಂದ ಇಲ್ಲಿವರೆಗೆ 9.40 ಲಕ್ಷ ಎಕರೆ ವಕ್ಫ್ ಆಸ್ತಿ ಒತ್ತುವರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಕ್ಫ್ ಕಾಯ್ದೆಗೆ 44 ತಿದ್ದುಪಡಿ ತರಲು ಮುಂದಾಗಿದ್ದು, ಪ್ರತ್ಯೇಕ ಸಮಿತಿಯನ್ನೂ ರಚಿಸಿದ್ದಾರೆ. ಇದರ ಬೆನ್ನಲ್ಲೇ ಪಹಣಿ ಪತ್ರಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗುತ್ತಿದೆ. ಇದರ ವಿರುದ್ಧ ಈಗಾಗಲೇ ಶ್ರೀರಾಮಸೇನೆ ರಾಜ್ಯವ್ಯಾಪಿ ಮನೆ, ಮಠ, ಮಂದಿರ, ಶಾಲಾ, ಕಾಲೇಜು, ಸಂಘಸಂಸ್ಥೆಗಳಿಗೆ ತೆರಳಿ ಮನವರಿಕೆ ಮಾಡುತ್ತಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ವಕ್ಫ್ ಒತ್ತುವರಿ ವಿಚಾರದಲ್ಲಿ ಯಾರೂ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ. ರೈತ ಸಂಘಟನೆಗಳು, ಮಠಾಧೀಶರು ಕೈಕಟ್ಟಿ ಕುಳಿತುಕೊಳ್ಳದೆ ಹೋರಾಟಕ್ಕೆ ಧುಮುಕಬೇಕು ಎಂದರು. ರಾಜ್ಯದಲ್ಲಿ ಸುಮಾರು 328 ಖಬರಸ್ಥಾನಕ್ಕೆ ಸರ್ಕಾರ ಜಾಗ ನೀಡಿದೆ. ಇದರಲ್ಲಿ ಗೋಮಾಳ ಜಾಗವೂ ಸೇರಿದೆ. ಅಲ್ಲದೆ ಸುಮಾರು 3.50 ಕೋಟಿ ರೂ. ಮೊತ್ತವನ್ನು ವಕ್ಫ್ ಆಸ್ತಿ ಸಂರಕ್ಷಣೆಗೆ ಬಿಡುಗಡೆ ಮಾಡಿದ್ದು, ಇವೆರಡೂ ಕಾನೂನು ಬಾಹಿರ ತೀರ್ಮಾನಗಳಾಗಿವೆ. ವಕ್ಫ್‌ನಲ್ಲೇ ಸಾಕಷ್ಟು ಮೊತ್ತ ಇರುವಾಗ ಪ್ರತ್ಯೇಕ ಅನುದಾನದ ಅವಶ್ಯಕತೆ ಏನು ಎಂದು ಅವರು ಪ್ರಶ್ನಿಸಿದರು.

ಇದೇ ಸಂದರ್ಭ ವಕ್ಫ್ ಸಂತ್ರಸ್ತರಿಗಾಗಿ ಶ್ರೀ ರಾಮಸೇನೆಯ ಸಹಾಯವಾಣಿ (9945288819) ಸಂಖ್ಯೆಯನ್ನು ಅನಾವರಣಗೊಳಿಸಲಾಯಿತು.

ಶ್ರೀರಾಮ ಸೇನೆ ರಾಜ್ಯ ಪ್ರ.ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್, ಜಿಲ್ಲಾಧ್ಯಕ್ಷ ಅರುಣ್ ಕದ್ರಿ, ವಿಭಾಗ ಅಧ್ಯಕ್ಷ ಮಧುಸೂದನ್ ಉರ್ವಸ್ಟೋರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net