ಖಾಸಗಿ ಬ್ಯಾಂಕ್ ಅಧ್ಯಕ್ಷನಿಂದ ಕಿರುಕುಳ ಆರೋಪ ಸಾಲಗಾರ ಆತ್ಮಹತ್ಯೆ ಪ್ರಕರಣ ದಾಖಲಿಸಿ ಅಧ್ಯಕ್ಷನ ಬಂಧಿಸಿದ ಪೊಲೀಸರು

mng--18 Dec Manohar pirera
Published on

ಮಂಗಳೂರು: ನಗರದ ಹಂಪನಕಟ್ಟೆಯಲ್ಲಿರುವ ಖಾಸಗಿ ಬ್ಯಾಂಕ್‌ನ ಅಧ್ಯಕ್ಷ ವ್ಯಕ್ತಿಯೊಬ್ಬರ ಬ್ಯಾಂಕ್ ಸಾಲದ ಹಣವನ್ನು ಸ್ವಂತಕ್ಕೆ ಬಳಸಿಕೊಂಡು, ಮನೆಯನ್ನು ವಶಕ್ಕೆ ಪಡೆದು ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಅವರು ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದು, ಪ್ರಕರಣ ದಾಖಲಿಸಿಕೊಂಡ ಕಂಕನಾಡಿ ಗ್ರಾಮಾಂತರ ಪೊಲೀಸರು ಬ್ಯಾಂಕ್ ಅಧ್ಯಕ್ಷನನ್ನು ಬಂಧಿಸಿದ್ದಾರೆ.

ಉಳಾಯಿಬೆಟ್ಟು ಕುಟಿನ್ನೋ ಪದವು ನಿವಾಸಿ ಮನೋಹರ್ ಪಿರೇರಾ(47) ಮಂಗಳವಾರ ಸಂಜೆ ವಿಡಿಯೋ ಮಾಡಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಖಾಸಗಿ ಬ್ಯಾಂಕ್ ಅಧ್ಯಕ್ಷ ತನ್ನ 9 ಲಕ್ಷ ಹಣವನ್ನು ತಿಂದು ಹಾಕಿದ್ದಾನೆ. ಎರಡು ವರ್ಷಗಳಿಂದ ಕೆಲಸ ಮಾಡಲಾಗದೆ ಕಷ್ಟ ಪಡುತ್ತಿದ್ದೇನೆ, ಮನೆಯನ್ನು ಸೀಜ್ ಮಾಡಿದ್ದಾನೆ ಇತ್ಯಾದಿ ವಿಷಯಗಳನ್ನು ಹೇಳಿ ವಿಡಿಯೋ ಮಾಡಿ ವಾಟ್ಸಪ್ ಗ್ರೂಪಿನಲ್ಲಿ ಹಾಕಿದ್ದರು.

ಘಟನೆಗೆ ಸಂಬಂಧಿಸಿ ಮನೋಹರ್ ಪಿರೇರಾ ಅವರ ತಮ್ಮ ಜೀವನ್ ಪಿರೇರಾ ಕಂಕನಾಡಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಹತ್ತು ವರ್ಷಗಳ ಹಿಂದೆ ಮನೆ ಖರೀದಿ ಮಾಡುವುದಕ್ಕಾಗಿ ಖಾಸಗಿ ಬ್ಯಾಂಕಿನಿಂದ ಸಾಲ ಪಡೆದಿದ್ದರು. ಸಾಲದ ಕಂತನ್ನು ಮನೋಹರ್ ಅವರ ಅಣ್ಣ ಗುಜರಾತಿನಲ್ಲಿರುವ ಮೆಲ್ಬರ್ನ್ ಪಿರೇರಾ ಬ್ಯಾಂಕಿಗೆ ಕಟ್ಟುತ್ತಿದ್ದರು. ಕೋವಿಡ್ ಬಳಿಕ ಆರ್ಥಿಕ ನಷ್ಟಗೊಂಡಿದ್ದರಿಂದ ಅವರು ಬ್ಯಾಂಕ್ ಸಾಲ ಪಾವತಿ ಮಾಡಿರಲಿಲ್ಲ. ಹೀಗಾಗಿ ಎರಡು ವರ್ಷಗಳ ಹಿಂದೆ ಬ್ಯಾಂಕ್ ಆಡಳಿತವು ಮನೆಯನ್ನು ಜಪ್ತಿ ಮಾಡಿತ್ತು.

ಆನಂತರ, ಮನೋಹರ್ ಪಿರೇರಾ ಅವರ ಅತ್ತೆಯೂ ಆಗಿರುವ ಸಿಸ್ಟರ್ ಕ್ರಿಸ್ಟಿನ್ ರವರು ಚಾರಿಟಿ ಸಂಸ್ಥೆಯೊಂದರಿಂದ ಮನೆ ಜಪ್ತಿಯನ್ನು ತಡೆಯುವುದಕ್ಕಾಗಿ 15 ಲಕ್ಷ ರೂ. ನೆರವು ನೀಡಿದ್ದರು. ಆ ಹಣವನ್ನು ಮನೋಹರ್ ಪಿರೇರಾ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿತ್ತು. ಆದರೆ, ಈ ಹಣವನ್ನು ಮನೋಹರ್ ಅವರು ತನ್ನ ಖಾತೆಯಿಂದ ಸೆಲ್ಫ್ ಚೆಕ್ ಮೂಲಕ ಸಾಲದ ಬಾಬ್ತು ಬ್ಯಾಂಕಿಗೆ ನೀಡಿದ್ದರು. ಈ ಹಣವನ್ನು ಬ್ಯಾಂಕ್ ಸಾಲಕ್ಕೆ ಜಮಾ ಮಾಡದೆ ಅಧ್ಯಕ್ಷ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎನ್ನುವ ಆರೋಪವನ್ನು ಮನೋಹರ್ ಮಾಡಿದ್ದಾರೆ. ಆ ಹಣದಲ್ಲಿ 9 ಲಕ್ಷವನ್ನು ಅಧ್ಯಕ್ಷ ತಿಂದಿದ್ದಾನೆ, ಈಗ ಮತ್ತೆ ಹಳೇಸಾಲ ಪಾವತಿಸುವಂತೆ ಕಿರುಕುಳ ನೀಡುತ್ತಿದ್ದಾನೆಂದು ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದರಿಂದ ಮಾನಸಿಕ ಖಿನ್ನತೆರಾಗಿ ಮನೋಹರ್ ಪಿರೇರಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಜೀವನ್ ಪಿರೇರಾ ದೂರಿನಲ್ಲಿ ತಿಳಿಸಿದ್ದಾರೆ. ಕಂಕನಾಡಿ ಗ್ರಾಮಾಂತರ ಠಾಣೆ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆಯೆಂದು ಪ್ರಕರಣ ದಾಖಲಿಸಿದ್ದಾರೆ.

ಬ್ಯಾಂಕ್ ಸ್ಪಷ್ಟನೆ: ವ್ಯಕ್ತಿಯೊಬ್ಬರು ಬ್ಯಾಂಕಿನಿಂದ ಸಾಲವನ್ನು ಪಡೆದಿದ್ದು, ಕ್ಲಪ್ತ ಸಮಯದಲ್ಲಿ ಮರುಪಾವತಿಸದ ಕಾರಣ ಸಾಲ ವಸೂಲಾತಿಗಾಗಿ ಕಾನೂನಿನ ಅವಕಾಶದಡಿ ವಸೂಲಾತಿ ಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೆ ಸಾಲಗಾರರಿಗೆ ಬಡ್ಡಿಯಲ್ಲಿ ರಿಯಾಯಿತಿ ನೀಡಿ ಸಾಲವನ್ನು ಮರುಪಾವತಿ ಮಾಡಲು ಒಂದು ಅವಕಾಶವನ್ನು ಸಹ ನೀಡಲಾಗಿತ್ತು. ಅದರೂ ಸಾಲಗಾರರು ಸಾಲವನ್ನು ಮರುಪಾವತಿ ಮಾಡಿರುವುದಿಲ.

ಸಾಲಗಾರರು ತಮ್ಮ ಉಳಿತಾಯ ಖಾತೆಯನ್ನು ವೈಯುಕ್ತಿಕ ನೆಲೆಯಲ್ಲಿ ವ್ಯವಹರಿಸುತ್ತಾ ಬಂದಿರುತ್ತಾರೆ. ಅದರಲ್ಲಿ ಯಾರು ಮಧ್ಯ ಪ್ರವೇಶಿಸಿರುವುದಿಲ್ಲ. ಅವರು ತಮ್ಮ ವೈಯುಕ್ತಿಕ ಸಮಸ್ಯೆಯಿಂದ ಈ ಕೃತ್ಯವನ್ನು ಎಸಗಿದ್ದು, ಅನಾವಶ್ಯಕವಾಗಿ ಬ್ಯಾಂಕಿನ ಅಧ್ಯಕ್ಷರ ಹೆಸರನ್ನು ಬಳಸಿ ಅಧ್ಯಕ್ಷರ ಮತ್ತು ಬ್ಯಾಂಕಿನ ಹೆಸರು ಹಾಳು ಮಾಡುವ ಪ್ರಯತ್ನ ಮಾಡಲಾಗಿದೆ. ಅದ್ದರಿಂದ ಸಾರ್ವಜನಿಕರು ಹಾಗೂ ಬ್ಯಾಂಕಿನ ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ತಪ್ಪು ಹೇಳಿಕೆಗಳಿಗೆ ಕಿವಿಕೊಡಬಾರದಾಗಿ ತಿಳಿಯಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net