ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸಮಾಜಕ್ಕೆ ಆದರ್ಶಪ್ರಾಯರು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿ

KALKURA
Published on

ಮಂಗಳೂರು: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ತ್ಯಾಗ ಜೀವನ ನಡೆಸಿ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿ ಎಲ್ಲರಿಗೂ ಅವರು ಆದರ್ಶಪ್ರಾಯರಾಗಿದ್ದಾರೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.

ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಪಂಚಮ ಪುಣ್ಯ ತಿಥಿಯ ಅಂಗವಾಗಿ ಕಲ್ಕೂರ ಪ್ರತಿಷ್ಠಾನವು ನಗರದ ಕದ್ರಿ ಕಂಬಳ ರಸ್ತೆ ಮಲ್ಲಿಕಾ ಬಡಾವಣೆಯ ಮಂಜುಪ್ರಾಸಾದದಲ್ಲಿ ಭಾನುವಾರ ಆಯೋಜಿಸಿದ ‘ಪೇಜಾವರ ವಿಶ್ವೇಶತೀರ್ಥ ನಮನ -2024’ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು 8ನೇ ವಯಸ್ಸಿಗೆ ಸನ್ಯಾಸ ದೀಕ್ಷೆ ಸ್ವೀಕರಿಸಿ ಜೀವಮಾನವಿಡೀ ಧಾರ್ಮಿಕ, ಶಿಕ್ಷಣ, ಆರೋಗ್ಯ, ಕಲೆ ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಉಪಕಾರ ಮಾಡಿದವರನ್ನು ಸದಾ ಸ್ಮರಿಸುವುದು ನಮ್ಮ ಕರ್ತವ್ಯ. ಪ್ರದೀಪ ಕುಮಾರ ಕಲ್ಕೂರರು ಸಮಾಜದ ಎಲ್ಲ ವರ್ಗದವರನ್ನು ಸೇರಿಸಿ ವಿಶ್ವೇಶತೀರ್ಥರ ಸಂಸ್ಮರಣೆ ಪ್ರತಿವರ್ಷ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯ. ವಿಶ್ವೇಶತೀರ್ಥರ ಮಾರ್ಗದಲ್ಲಿ ಸಾಗುವುದೇ ಅವರಿಗೆ ನಾವು ನೀಡುವ ದೊಡ್ಡ ಗೌರವ. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಜ.1ರಿಂದ 3ರವರೆಗೆ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಸಂಸ್ಮರಣಾ ಕಾರ್ಯಕ್ರಮ, ಏ.9-13ರವರೆಗೆ ತತ್ವಜ್ಞಾನ ಸಮ್ಮೇಳನ ನಡೆಯಲಿದೆ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕುಲದೀಪ ಎಂ. ಚೌಟರ ಅರಮನೆ ಮೂಡುಬಿದಿರೆ ಪುಷ್ಪ ನಮನ ಸಲ್ಲಿಸಿದರು. ವೇದ ವಿದ್ವಾಂಸ ಡಾ.ಸತ್ಯಕೃಷ್ಣ ಭಟ್ ವಿಶ್ವೇಶತೀರ್ಥರ ಬಗ್ಗೆ ಸಂಸ್ಮರಣಾ ನುಡಿಗಳನ್ನಾಡಿದರು.

ಪ್ರಮುಖರಾದ ಶರವು ರಾಘವೇಂದ್ರ ಶಾಸಿ, ಡಾ.ಹರಿಕೃಷ್ಣ ಪುನರೂರು, ಡಾ.ಎಂ.ಬಿ.ಪುರಾಣಿಕ್, ಆಯಿಷಾ ಪೆರ್ಲ, ಉದ್ಯಮಿ ಸೂರ್ಯನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ತಂಡಗಳಿಂದ ಕೃಷ್ಣಗೀತ ಗಾಯನ ನಡೆಯಿತು. ಇದೇ ಸಂದರ್ಭ ಹಿರಿಯ ಸಾಧಕರಿಗೆ ಜೀವಮಾನ ಸಾಧನಾ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಪೇಜಾವರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಂಚೆ ಕಾರ್ಡಿನಲ್ಲಿ ವಿಶ್ವೇಶತೀರ್ಥ ಶ್ರೀಪಾದರ ಚಿತ್ರ ಹಾಗೂ ಪ್ರಬಂಧ ರಚನಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net