

ಪ್ರಕಾಶ್ ಮಂಜೇಶ್ವರ ಮಂಗಳೂರು
ಹೊಯಿಗೆ ಬಜಾರ್‌ನಲ್ಲಿದ್ದ ರೈಲ್ವೆ ಗೂಡ್ಸ್ ಶೆಡ್ ಉಳ್ಳಾಲಕ್ಕೆ ಸ್ಥಳಾಂತರ ಬಳಿಕವೂ ಪಾಂಡೇಶ್ವರ ಸಮೀಪದ ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಸಾರ್ವಜನಿಕರು ದಿನಂಪ್ರತಿ ಎದುರಿಸುತ್ತಿದ್ದ ಸಮಸ್ಯೆ ಬಗೆಹರಿದಿಲ್ಲ..!
ಹೊಯಿಗೆ ಬಜಾರು ಈಗ ಗೂಡ್ಸ್ ರೈಲು ಬದಲು ದಕ್ಷಿಣ ರೈಲ್ವೆಯ ಪ್ರಯಾಣಿಕರ ರೈಲುಗಳ ತಂಗುದಾಣವಾಗಿ ಪರಿವರ್ತನೆಯಾಗಿದೆ. ಇಲ್ಲಿನ ರೈಲ್ವೆ ಕ್ರಾಸಿಂಗ್ ಬಳಿ ರೈಲು ಪ್ರಯಾಣಿಸುವ ಸಂದರ್ಭ ಅರ್ಧ ತಾಸಿಗೂ ಅಧಿಕ ಕಾಲ ಗೇಟ್ ಮುಚ್ಚಲಾಗುತ್ತದೆ. ಪರಿಣಾಮ ಉಭಯ ಕಡೆಗಳಲ್ಲಿ ವಾಹನಗಳ ದಟ್ಟಣೆ ಅಧಿಕವಾಗುತ್ತಿದೆ.
ಕೇರಳ, ತಲಪಾಡಿ, ಕೊಣಾಜೆ ಮುಂತಾದ ಕಡೆಗಳಿಂದ ಮಂಗಳೂರು ಸ್ಟೇಟ್‌ಬ್ಯಾಂಕ್, ಬಂದರು, ಹಂಪನಕಟ್ಟೆ, ನಗರದ ಪ್ರಮುಖ ಶಿಕ್ಷಣ ಸಂಸ್ಥೆಗಳು ಮುಂತಾದ ಕೇಂದ್ರಗಳನ್ನು ಸಂಪರ್ಕಿಸಲು ರಾಷ್ಟ್ರೀಯ ಹೆದ್ದಾರಿ 66ರಿಂದ ಜಪ್ಪಿನಮೊಗರು- ಮಹಾಕಾಳಿಪಡ್ಪು- ಮಂಗಳಾದೇವಿ- ಪಾಂಡೇಶ್ವರ ಅತ್ಯಂತ ಸಮೀಪ ಮಾರ್ಗ. ದಿನಂಪ್ರತಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಸಂಚರಿಸುವ ಈ ಮಾರ್ಗದಲ್ಲಿ ಪಾಂಡೇಶ್ವರ ಲೆವೆಲ್ ಕ್ರಾಸಿಂಗ್‌ನಲ್ಲಿ ರೈಲು ಸಂಚರಿಸುವ ಸಂದರ್ಭ ದೀರ್ಘ ಅವಧಿ ಗೇಟು ಮುಚ್ಚುವುದರಿಂದ ಉಭಯ ಕಡೆಗಳಲ್ಲಿ ವಾಹನಗಳಲ್ಲಿ ಸಂಚರಿಸುವವರು ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಾರೆ.
ಮಹಾಕಾಳಿಪಡ್ಪು ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಕೆಳಸೇತುವೆ(ಆರ್‌ಯುಬಿ) ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ರೈಲ್ವೆ ಕೆಳಸೇತುವೆ ಉದ್ಘಾಟನೆ ಬಳಿಕ ಈ ಮಾರ್ಗದಲ್ಲಿ ವಾಹನ ದಟ್ಟಣೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ.
ಕೇರಳದಿಂದ ಹಾಗೂ ಇತರ ಕಡೆಗಳಿಂದ ಬಂದು ಮಂಗಳೂರಿನಲ್ಲಿ ಲಂಗರು ಹಾಕುವ ಪ್ಯಾಸೆಂಜರ್ ರೈಲುಗಳಿಗಾಗಿ ಪಾಂಡೇಶ್ವರ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟುಗಳು ದಿನದಲ್ಲಿ ಹಲವು ಬಾರಿ ಮುಚ್ಚಲ್ಪಡುತ್ತಿದೆ. ಪರಿಣಾಮ ಈ ಪ್ರದೇಶದಲ್ಲಿ ಇತರ ವಾಹನಗಳಲ್ಲಿ ಹಾದು ಹೋಗುವ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಗೂಡ್ಸ್ ಶೆಡ್ ಬೇರೆ ಕಡೆ ಸ್ಥಳಾಂತರಿಸಿದರೂ ಸಮಸ್ಯೆ ನಿವಾರಣೆಯಾಗಿಲ್ಲ. ಈ ಸಮಸ್ಯೆ ಪರಿಹರಿಸಲು ಸಂಬಂಧಪಟ್ಟವರು ಗಮನ ಹರಿಸಬೇಕು.
ನೇಮು ಕೊಟ್ಟಾರಿ
ಸಾಮಾಜಿಕ ಕಾರ್ಯಕರ್ತರು