

ಮಂಗಳೂರು: ನಗರದ ಪಾಂಡೇಶ್ವರ ರೊಸಾರಿಯೋ ಶಾಲಾ ಬಳಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಆಟೋ ರಿಕ್ಷಾ ಚಾಲಕರು ದುರಂತ ಸಾವನ್ನಪ್ಪಿರುವುದು ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಹಾಸನದ ಆಲೂರು ಪಲ್ಯ ಹೋಬಳಿಯ ರಾಜು (50) ಹಾಗೂ ಪುತ್ತೂರು ರಾಮಕುಂಜದ ದೇವರಾಜ್ (46) ಮೃತಪಟ್ಟ ರಿಕ್ಷಾ ಚಾಲಕರು. ಮಂಗಳೂರಿನಲ್ಲಿ ಬಾಡಿಗೆ ರಿಕ್ಷಾದಲ್ಲಿ ಚಾಲಕರಾಗಿ ದುಡಿಯುತ್ತಿದ್ದ ಇವರಿಬ್ಬರು ಬುಧವಾರ ರಾತ್ರಿ ರೊಸಾರಿಯೋ ಚರ್ಚ್ ಬಳಿ ತಾವು ವಾಸವಿದ್ದ ಬಾಡಿಗೆ ರೂಮ್ನ ಎದುರು ಬುಧವಾರ ರಾತ್ರಿ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ಬೇಗ ತೆರಳಿದ್ದ ಚಾಲಕರು: ರಾತ್ರಿ ವೇಳೆ ಬಾಡಿಗೆ ಮಾಡುವ ಇವರಿಬ್ಬರು ಮಳೆಯ ಕಾರಣ ಬಾಡಿಗೆ ಇರುವುದಿಲ್ಲ ಎಂದು ಬೇಗನೆ ರೂಮ್ಗೆ ಹೋಗಿದ್ದರು. ರಾತ್ರಿ ರಿಕ್ಷಾ ತೊಳೆಯಲೆಂದು ಬಕೆಟ್ನಲ್ಲಿ ನೀರು ಹಿಡಿದುಕೊಂಡು ರಾಜು ರಿಕ್ಷಾದ ಬಳಿಗೆ ಬಂದಿದ್ದಾರೆ. ಅಲ್ಲಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ಅವರ ಗಮನಕ್ಕೆ ಬರದೆ ಸ್ಪರ್ಶಿಸಿದ್ದಾರೆ. ಅಷ್ಟರಲ್ಲಿ ಆಘಾತಕ್ಕೊಳಗಾಗಿ ನೆಲಕ್ಕೆ ಬಿದ್ದಿದ್ದಾರೆ. ಶಬ್ದ ಕೇಳಿ ರೂಮ್ ಒಳಗಿದ್ದ ದೇವರಾಜ್ ಕೈಗೆ ಸಿಕ್ಕಿದ ಗೋಣಿ ಚೀಲ ಹಿಡಿದುಕೊಂಡು ರಾಜು ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಆಗ ಅವರಿಗೂ ವಿದ್ಯುತ್ ಆಘಾತವಾಗಿ ನೆಲಕ್ಕೆ ಬಿದ್ದು ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ನಿರ್ಜನ ರಸ್ತೆ: ರಾತ್ರಿ ಮಳೆ ಇದ್ದ ಕಾರಣ ರಸ್ತೆಯಲ್ಲಿ ರಾತ್ರಿಯಿಂದ ಯಾರೂ ಸಂಚರಿಸದ ಕಾರಣ ಘಟನೆ ಬೆಳಗ್ಗೆಯಷ್ಟೇ ಗಮನಕ್ಕೆ ಬಂದಿದೆ. ರಾತ್ರಿ ವೇಳೆ ಯಾರಾದರೂ ಅಲ್ಲಿ ಹೋಗುತ್ತಿದ್ದರೆ ಅವರಿಗೂ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಆರಂಭದಲ್ಲಿ ಬೆಳಗ್ಗೆ ನಸುಕಿನ ವೇಳೆ ಘಟನೆ ನಡೆದಿದೆ ಎಂದು ಸ್ಥಳೀಯರು ಭಾವಿಸಿದ್ದು, ಇಲ್ಲಿರುವ ಸಿಸಿ ಟಿವಿಯಲ್ಲಿ ರಾತ್ರಿಯೇ ವಿದ್ಯುತ್ ತಂತಿಗಳು ಕಡಿದು ಬಿದ್ದಿರುವ ದೃಶ್ಯ ದಾಖಲಾಗಿದೆ.
ತಂತಿಯಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್: ಸಾಮಾನ್ಯವಾಗಿ ವಿದ್ಯುತ್ ತಂತಿ ಕಡಿದು ಬಿದ್ದಾಗ, ಕಂಬ ಮುರಿದು ಬಿದ್ದಾಗ ಟ್ರಿಪ್ ಆಗಿ ವಿದ್ಯುತ್ ಸಂಚಾರ ಕಡಿತಗೊಳ್ಳುತ್ತದೆ. ಆದರೆ ಪಾಂಡೇಶ್ವರದಲ್ಲಿ ಕಡಿದು ಬಿದ್ದಿದ್ದ ತಂತಿ ಬೀದಿ ದೀಪಕ್ಕೆ ಅಳವಡಿಸಿದ ತಂತಿಯಾದ ಕಾರಣ ಕಡಿದು ಬಿದ್ದ ಬಳಿಕವೂ ವಿದ್ಯುತ್ ಪ್ರವಹಿಸುತ್ತಿತ್ತು. ಇದರಿಂದಾಗಿ ದುರ್ಘಟನೆ ನಡೆದಿದೆ ಎಂದು ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ತಿಳಿಸಿದ್ದಾರೆ.
ರಾಜು 35 ವರ್ಷದಿಂದ ರಿಕ್ಷಾ ಚಾಲನೆ: ಹಾಸನದ ಆಲೂರಿನ ರಾಜು ಅವರು ಕಳೆದ ಸುಮಾರು 35 ವರ್ಷಕ್ಕೂ ಅಧಿಕ ಸಮಯದಿಂದ ಮಂಗಳೂರಿನಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದಾರೆ. ಬಾಡಿಗೆ ರಿಕ್ಷಾದಲ್ಲಿ ದುಡಿಯುತ್ತಿದ್ದ ರಾಜು ಇಬ್ಬರು ಪುತ್ರರು ಹಾಗೂ ಪತ್ನಿಗೆ ಆಧಾರವಾಗಿದ್ದರು. ಎರಡು ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು ಎಂದು ಮೃತ ರಾಜು ಅವರ ಅತ್ತಿಗೆ ಶಶಿಕಲಾ ಬೇಸರ ವ್ಯಕ್ತಪಡಿಸಿದ್ದಾರೆ.
ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದ ದೇವರಾಜು: ದೇವರಾಜು ಕಳೆದ 25 ವರ್ಷಗಳಿಂದ ಮಂಗಳೂರಿನಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದಾನೆ. ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದ. ನಾವು ಏಳು ಮಂದಿ ಮಕ್ಕಳು. ದೇವರಾಜು ಅವಿವಾಹಿತನಾಗಿದ್ದರೂ ಮನೆಯ ಜವಾಬ್ಧಾರಿಯನ್ನು ಹೊತ್ತಿದ್ದ. ಹೊಟ್ಟೆಪಾಡಿಗಾಗಿ ಮಂಗಳೂರಿನಲ್ಲಿ ರಿಕ್ಷಾ ಓಡಿಸುತ್ತಿದ್ದ. ಇದುವರೆಗೆ ಆತನಿಂದ ಯಾವುದೇ ರಸ್ತೆ ಅಪಘಾತವೂ ಆಗಿಲ್ಲ. ಆದರೆ ಮೆಸ್ಕಾಂನವರ ನಿರ್ಲಕ್ಷೃದಿಂದ ನಮ್ಮ ಸಹೋದರನನ್ನು ಕಳೆದುಕೊಳ್ಳುವಂತಾಗಿದೆ ಎಂದು ಮೃತ ದೇವರಾಜುರವರ ಸಹೋದರ ಆನಂದ ರಾಮಕುಂಜ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್, ಪೊಲೀಸ್ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮಧ್ಯಾಹ್ನದ ವೇಳೆಗೆ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಯಿತು. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷೃದ ವಿರುದ್ಧ 304 ಎ ಪ್ರಕಾರ ಪ್ರಕರಣ ದಾಖಲಾಗಿದೆ.
ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ
ಮೆಸ್ಕಾಂ ಮಂಗಳೂರು ವಿಭಾಗ ವ್ಯಾಪ್ತಿಯ ನಿರೇಶ್ವಾಲ್ಯ ಪರಿವರ್ತಕದಿಂದ ಹೊರಡುವ ದಾರಿದೀಪದ ಲೈನ್ ಮೇಲೆ, ಬುಧವಾರ ರಾತ್ರಿ ಸುರಿದ ಗಾಳಿ ಮಳೆಯಿಂದ ಹತ್ತಿರದಲ್ಲಿದ್ದ ಮರದ ಗೆಲ್ಲು ಬಿದ್ದು, ತಂತಿ ತುಂಡಾಗಿರುತ್ತದೆ. ಈ ತಂತಿಯಿಂದ ಆಟೋ ಚಾಲಕರಾದ ದೇವರಾಜ್ ಮತ್ತು ರಾಜು ಎಂಬವರು ಮೃತಪಟ್ಟಿರುವುದಕ್ಕೆ ಮೆಸ್ಕಾಂ ತೀವ್ರ ವಿಷಾದ ವ್ಯಕ್ತಪಡಿಸಿದೆ. ಮೆಸ್ಕಾಂ ನಿರ್ದೇಶಕರಾದ ಡಿ.ಪದ್ಮಾವತಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿ ಮಾಡಿ ಘಟನೆಯ ಬಗ್ಗೆ ಚರ್ಚಿಸಿ ಮೃತರ ಅವಲಂಬಿತರಿಗೆ ತಲಾ 5 ಲಕ್ಷ ರೂ. ಪರಿಹಾರ ಧನ ಮಂಜೂರು ಮಾಡಿದ್ದಾರೆ.