

ಮಂಗಳೂರು: ಪಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಮಾ.27ರಿಂದ 30ರವರೆಗೆ ಕುಡುಪು ಬ್ರಹ್ಮಶ್ರೀ ವೇದಮೂರ್ತಿ ಕುಡುಪು ಶ್ರೀ ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು, ಇದರ ಅಂಗವಾಗಿ ಚಪ್ಪರ ಮುಹೂರ್ತ ಕಾರ್ಯಕ್ರಮ ಬುಧವಾರ ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಈ ಸಂದರ್ಭ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಸುಪ್ರೀತ್ ರೈ ಅವರು ಮಾತನಾಡಿ, ಶ್ರೀ ದೇವಿಯ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಲು ನಮಗೆ ಸಿಕ್ಕಿರಿವುದು ಸುಯೋಗ. ನಾವೆಲ್ಲ ಈ ಕೈಂಕರ್ಯದಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾಗೋಣ ಎಂದರು.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ತಾರನಾಥ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಮೋಹನ್‌ದಾಸ್ ಶೆಟ್ಟಿ, ಉಪಾಧ್ಯಕ್ಷರಾದ ಸನತ್ ಕುಮಾರ್ ರೈ, ಶಶಿಕಲಾ ಬೋರುಗುಡ್ಡೆ, ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಉಗ್ಗಕೋಡಿ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಗೋಕುಲ್‌ದಾಸ್ ಶೆಟ್ಟಿ, ಚಪ್ಪರ ಸಮಿತಿ ಸದಸ್ಯರಾದ ಉಮಾನಾಥ ಸುವರ್ಣ, ಸಂಘಟನಾ ಕಾರ್ಯದರ್ಶಿಗಳಾದ ಬಾಲಕೃಷ್ಣ ಬೋರುಗುಡ್ಡೆ, ಸತ್ಯಜಿತ್ ಮತ್ತಿತರರು ಉಪಸ್ಥಿತರಿದ್ದರು.
ಮಾ.27ರಂದು ಹೊರೆಕಾಣಿಕೆ ಮೆರವಣಿಗೆ: ಬ್ರಹ್ಮಕಲಶೋತ್ಸವ ಅಂಗವಾಗಿ ಮಾ.27ರಂದು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಒಟ್ಟು 3 ದಿಕ್ಕಿನಿಂದ ಸಂಜೆ 4ಗಂಟೆಗೆ ಮೆರವಣಿಗೆ ಹೊರಡಲಿದ್ದು, ನೀರುಮಾರ್ಗ ಶ್ರೀ ಸುಬ್ರಹ್ಮಣ್ಯದಿಂದ ಮಾಡ್ರಬೈಲ್, ಪಡು ಬದಿನಡಿ, ಚಿಲ್ಪಾಡಿ ಮಾರ್ಗವಾಗಿ ಶ್ರೀಕ್ಷೇತ್ರಕ್ಕೆ, ಬೊಂಡಂತಿಲ ಕಲ್ಲುಡೇಲು ಶ್ರೀ ಸದಾಶಿವ ದೇವಸ್ಥಾನದಿಂದ ಕೋನಿಮಾರು, ಸತ್ತಿಕಲ್ಲು, ಕೊಂಬೆಲ್ ಮಾರ್ಗವಾಗಿ ಶ್ರೀಕ್ಷೇತ್ರಕ್ಕೆ, ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದಿಂದ ಉಳಾಯಿಬೆಟ್ಟು, ಪೆರ್ಮಂಕಿ, ಮಲ್ಲೂರು ಗ್ರಾಮದಿಂದ ಶ್ರೀ ಕ್ಷೇತ್ರಕ್ಕೆ ಮೆರವಣಿಗೆ ಆಗಮಿಸಲಿದೆ ಎಂದು ಕ್ಷೇತ್ರದ ಕಾರ್ಯಾಧ್ಯಕ್ಷರಾದ ಸುಪ್ರೀತ್ ರೈ ತಿಳಿಸಿದ್ದಾರೆ.