ಪಡೀಲ್ ಹೋಮ್ ಸ್ಟೇ ದಾಳಿ ಪ್ರಕರಣ ಎಲ್ಲಾ 39 ಆರೋಪಿಗಳು ಖುಲಾಸೆ

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ಮಂಗಳೂರು: ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದ್ದ ಪಡೀಲ್‌ನ ಬಟ್ಟಗುಡ್ಡೆ ಮೋರ್ನಿಂಗ್ ಮಿಸ್ಟ್ ಹೋಂ ಸ್ಟೇ ದಾಳಿ ಪ್ರಕರಣದ ತೀರ್ಪು ಘಟನೆ ನಡೆದು 12 ವರ್ಷಗಳ ನಂತರ ಮಂಗಳವಾರ ಹೊರ ಬಿದ್ದಿದ್ದು, ಸಾಕ್ಷಾೃಧಾರಗಳ ಕೊರತೆಯಿಂದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.


ಹಲ್ಲೆ ನಡೆಸಿದ 44 ಆರೋಪಿಗಳ ಪೈಕಿ 39 ಆರೋಪಿಗಳನ್ನು ದೋಷಮುಕ್ತಗೊಳಿಸಿ ಮಂಗಳೂರಿನ ಆರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಒಟ್ಟು 44 ಆರೋಪಿಗಳ ಪೈಕಿ ಮಹೇಶ್, ಜಗದೀಶ್ ಹಾಗೂ ಪ್ರಕಾಶ್ ಈಗಾಗಲೇ ಸಾವಿಗೀಡಾಗಿದ್ದರೆ, ಇನ್ನೋರ್ವ ಆರೋಪಿಯಾಗಿದ್ದ ಪತ್ರಕರ್ತ ನವೀನ್ ಸೂರಿಂಜೆ ಅವರನ್ನು ಸರ್ಕಾರ ಈ ಹಿಂದೆ ಪ್ರಕರಣದಿಂದ ಕೈ ಬಿಟ್ಟಿತ್ತು. ಇನ್ನೋರ್ವ ಕಾನೂನಿನೊಡನೆ ಸಂಘರ್ಷ ನಡೆಸಿದವನಾಗಿದ್ದು, ಆತನನ್ನು ಈ ಹಿಂದೆಯೇ ನ್ಯಾಯಾಲಯ ದೋಷಮುಕ್ತಗೊಳಿಸಿದೆ.


ಪ್ರಕರಣದ ಹಿನ್ನೆಲೆ
2012ರ ಜುಲೈ 28ರಂದು ಸಂಜೆ ವೇಳೆಗೆ ಪ್ರಮುಖ ಆರೋಪಿ ಸುಭಾಷ್ ಪಡೀಲ್ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪಡೀಲ್ ಹೋಂ ಸ್ಟೇಗೆ ದಾಳಿ ಮಾಡಿ ಅಲ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಮೂರು ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇಲ್ಲಿ ಪಾರ್ಟಿ ನಿರತರಾಗಿದ್ದರು. ವಿದ್ಯಾರ್ಥಿನಿಯರ ಪೈಕಿ ಇಬ್ಬರು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಮಕ್ಕಳಾಗಿದ್ದು, ಇದು ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು. ಘಟನೆ ಬಳಿಕ ಪರ- ವಿರೋಧದ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ದಾಳಿಕೋರರು, ಐವರು ಹುಡುಗಿಯರು ಸೇರಿದಂತೆ ಪಾರ್ಟಿಯಲ್ಲಿದ್ದ 13 ಮಂದಿಯನ್ನು ಥಳಿಸಿ, ಬಟ್ಟೆ ಬಿಚ್ಚಿಸಿ ಕಿರುಕುಳ ನೀಡಿದ್ದಾರೆ ಎಂದೂ ಆರೋಪಿಸಲಾಗಿತ್ತು.


ಅಂತಿಮವಾಗಿ ಪೊಲೀಸರು 44 ಮಂದಿಯನ್ನು ಬಂಧಿಸಿ, ಅವರ ವಿರುದ್ಧ ಆರೋಪಪಟ್ಟಿ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ದಾಳಿ ಘಟನೆಯನ್ನು ಚಿತ್ರೀಕರಿಸಲು ತೆರಳಿದ್ದ ಇಬ್ಬರು ಪತ್ರಕರ್ತರ ಹೆಸರನ್ನು ಕೂಡ ಆರೋಪ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಸುದೀರ್ಘ ವಿಚಾರಣೆ ಬಳಿಕ ವಾದ ಪ್ರತಿವಾದ ನಡೆದು ಆರೋಪ ಸಾಬೀತು ಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಎಸ್.ವಿ.ಕಾಂತರಾಜು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದ್ದಾರೆ.


ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ: ಹೋಂ ಸ್ಟೇ ಪ್ರಕರಣ ಅಂದು ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಸುದ್ದಿಯಾಗಿತ್ತು. ರಾಷ್ಟ್ರೀಯ ಮಟ್ಟದ ದೃಶ್ಯ ಮಾಧ್ಯಮದ ಪ್ರತಿನಿಧಿಗಳು ಮಂಗಳೂರಿಗೆ ಆಗಮಿಸಿ, ಸುಮಾರು ಒಂದು ತಿಂಗಳ ಕಾಲ ಇಲ್ಲಿನ ಬೆಳವಣಿಗೆಗಳನ್ನು ಸುದ್ದಿ ಮಾಡಿದ್ದರು. ಘಟನೆಯ ಬಳಿಕ ರಾಷ್ಟ್ರ, ರಾಜ್ಯ ನಾಯಕರು ಮಂಗಳೂರಿಗೆ ಭೇಟಿ ನೀಡಿದ್ದರು. ಕೋಮು ಸೂಕ್ಷ್ಮವಾಗಿರುವ ನಗರದಲ್ಲಿ ಯಾವುದೇ ದುಷ್ಕೃತ್ಯ ನಡೆಯದಂತೆ ಆಗ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಆಗ ಸೀಮಂತ್ ಕುಮಾರ್ ಸಿಂಗ್ ನಗರ ಪೊಲೀಸ್ ಆಯುಕ್ತರಾಗಿದ್ದರು. ಆಗ ಎಸಿಪಿಯಾಗಿದ್ದ ಟಿ.ಆರ್.ಜಗನ್ನಾಥ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net