ಪಡೀಲ್ ಆಂಬುಲೆನ್ಸ್ ಪಲ್ಟಿ ರೋಗಿ ಮೃತ್ಯು ಪತ್ನಿ, ಮಗ ಸಹಿತ ಮೂವರಿಗೆ ಗಾಯ

mng--25 sep Dasappa rai
Published on

ಮಂಗಳೂರು: ಪುತ್ತೂರಿನಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕರೆ ತರುತ್ತಿದ್ದ ಆಂಬುಲೆನ್ಸ್ ಪಡೀಲು ಸಮೀಪ ಬುಧವಾರ ಬೆಳಗ್ಗಿನ ಜಾವ ಪಲ್ಟಿಯಾಗಿ ಆಂಬುಲೆನ್ಸ್‌ನಲ್ಲಿದ್ದ ರೋಗಿ, ಕಡಬ ಹಳೆನೇರೆಂಕಿ ಗ್ರಾಮದ ರಾಮಜಾಲು ನಿವಾಸಿ ದಾಸಪ್ಪ ರೈ(73ವ.)ರವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಪತ್ನಿ, ಮಗ ಹಾಗೂ ಸಂಬಂಧಿಕ ಯುವಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.


ದಾಸಪ್ಪ ರೈ ಅವರ ಪತ್ನಿ ನಳಿನಿ ರೈ (54), ಪುತ್ರ ಹರ್ಷಿತ್ (33) ಹಾಗೂ ಸಂಬಂಧಿಕ ಯುವಕ ಮನೀಷ್ (24) ಗಾಯಾಳುಗಳು.
ಹಳೆನೇರೆಂಕಿ ಗ್ರಾಮದ ಕದ್ರ ನಿವಾಸಿ, ಕೂಲಿಕಾರ್ಮಿಕ ದಾಸಪ್ಪ ರೈಯವರಿಗೆ ಸೆ.24ರಂದು ತಡರಾತ್ರಿ 1.30ರ ವೇಳಗೆ ಸ್ಟ್ರೋಕ್ ಆಗಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರ ಮನೆ ಸಮೀಪದ ನಿವಾಸಿ, ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮ್ಯಾನೇಜರ್ ರಮೇಶ್ ರೈಯವರು ತನ್ನ ಕಾರಿನಲ್ಲಿ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಕರೆ ತಂದಿದ್ದರು. ಅಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಾಸಪ್ಪ ರೈ ಅವರನ್ನು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಪುತ್ತೂರಿನಿಂದ ಕರೆದೊಯ್ಯಲಾಗಿತ್ತು. ಮುಂಜಾನೆ 4 ಗಂಟೆ ವೇಳೆಗೆ ಆಂಬುಲೆನ್ಸ್ ಫಸ್ಟ್ ನ್ಯೂರೋ ಆಸ್ಪತ್ರೆ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ವಿದ್ಯುತ್ ಕಂಬವೊಂದಕ್ಕೆ ಗುದ್ದಿದೆ. ಅಸೌಖ್ಯದಿಂದ ಬಳಲುತ್ತಿದ್ದ ದಾಸಪ್ಪ ರೈ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅಪಘಾತದಲ್ಲಿ ಆಂಬಲೆನ್ಸ್ ನಜ್ಜು ಗುಜ್ಜಾಗಿದೆ. ವಿದ್ಯುತ್ ಕಂಬ ಮುರಿದು ನಿಂತಿದೆ. ಈ ಬಗ್ಗೆ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net