

ಮಂಗಳೂರು: ಆನ್‌ಲೈನ್ ಶಾಂಪಿಂಗ್ ಸಂಸ್ಥೆಯ ನಿಯಮಗಳನ್ನೇ ಬಂಡವಾಳ ಮಾಡಿಕೊಂಡು 5 ವರ್ಷಗಳಲ್ಲಿ 30 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ ಪ್ರಕರಣದಲ್ಲಿ ರಾಜಸ್ಥಾನ ಮೂಲದ ಇಬ್ಬರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಧೋಪುರ್ ಜಿಲ್ಲೆಯ ನಿವಾಸಿ ರಾಜ್‌ಕುಮಾರ್ ಮೀನಾ (23), ಕರೌಲಿ ಜಿಲ್ಲೆಯ ಸುಭಾಸ್ ಗುರ್ಜರ್ (27) ಬಂಧಿತ ಆರೋಪಿಗಳು. ಆರೋಪಿಗಳ ವಿರುದ್ಧ ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ವಿವರ: ಸೆ.21ರಂದು ಆನ್‌ಲೈನ್ ಕಂಪನಿಯ ಡೆಲಿವರಿ ಬಾಯ್ ಮೊಹಮ್ಮದ್ ನಿಶಾಕ್ ಎಂಬಾತ ವ್ಯಕ್ತಿಗಳಿಬ್ಬರು 12 ರೀತಿಯ ಸಾಮಗ್ರಿಗಳನ್ನು ಖರೀದಿಸಿ, ಅದರಲ್ಲಿ ದೊಡ್ಡ ಮೌಲ್ಯ ಹೊಂದಿರುವ (ತಲಾ 5.32 ಲಕ್ಷ) ಎರಡು ಸೋನಿ ಕ್ಯಾಮರಾಗಳನ್ನು ಆರ್ಡರ್ ಮಾಡಿ ಕೊನೆಕ್ಷಣದಲ್ಲಿ ಡೆಲಿವರಿ ಕ್ಯಾನ್ಸಲ್ ಮಾಡಿರುವ ಬಗ್ಗೆ ಉರ್ವಾ ಪೊಲೀಸರಿಗೆ ದೂರು ನೀಡಿದ್ದರು.
ವಂಚನೆ ನಡೆದದ್ದು ಹೀಗೆ: 11.32 ಲಕ್ಷ ಮೌಲ್ಯದ ಮೂರು ಸೋನಿ ಕ್ಯಾಮರಾ ಸೇರಿದಂತೆ 2ರಿಂದ 5 ಸಾವಿರ ಮೌಲ್ಯದ ಹತ್ತಕ್ಕೂ ಹೆಚ್ಚು ಸಣ್ಣ ಪುಟ್ಟ ಇಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಆರೋಪಿಗಳು ಆರ್ಡರ್ ಮಾಡಿದ್ದರು. 11.32 ಲಕ್ಷ ರೂ. ಮೊತ್ತವನ್ನು ಅಡ್ವಾನ್ಸ್ ಪೇಮೆಂಟ್ ಮಾಡಿದ್ದಾರೆ. ಕಡಿಮೆ ಮೊತ್ತದ ಉಪಕರಣಗಳಿಗೆ ಡೆಲಿವರಿ ಸಂದರ್ಭದಲ್ಲಿ ಪೇಮೆಂಟ್ ಮಾಡುವುದಾಗಿ ಹೇಳುತ್ತಾರೆ. ಎಲ್ಲ ಉಪಕರಣಗಳನ್ನೂ ಏಕಕಾಲದಲ್ಲಿ ನೀಡುವಂತೆ ಆರೋಪಿಗಳು ತಿಳಿಸುತ್ತಾರೆ. ಮಂಗಳೂರಿನ ಪ್ರಕರಣದಲ್ಲಿ ಡೆಲಿವರಿ ಬಾಯ್ ಮೊಹಮ್ಮದ್ ನಿಶಾಕ್ ಸಾಮಗ್ರಿ ಆರ್ಡರ್ ಮಾಡಿದ್ದ ಅಮಿತ್ ಎಂದು ಹೆಸರಿಸಿದ್ದ ವ್ಯಕ್ತಿಯನ್ನು ಕೆಎಸ್ಸಾರ್ಟಿಸಿ ಬಳಿಗೆ ಕರೆಸಿಕೊಂಡಿದ್ದಾನೆ. ಎಲ್ಲ ಐಟಂಗಳನ್ನು ಏಕಕಾಲದಲ್ಲಿ ತಂದಿಟ್ಟಿದ್ದ. ಅಮಿತ್ ಸ್ಪಾಟ್ ಪೇಮೆಂಟ್ ಬಗ್ಗೆ ಓಟಿಪಿ ಪಡೆದು, ಹಣವನ್ನು ನೀಡುವ ಬಗ್ಗೆ ಮಾತುಕತೆ ನಡೆಸುತ್ತಿದ್ದರೆ, ಆತನ ಜೊತೆಗಿದ್ದ ಇನ್ನೊಬ್ಬ ವ್ಯಕ್ತಿ ಡೆಲಿವರಿ ಬಾಯ್ ಗೆ ತಿಳಿಯದಂತೆ ಐಟಂ ಬಾಕ್ಸಿನ ಟ್ರ್ಯಾಕಿಂಗ್ ಐಡಿಯನ್ನು ಅದಲು ಬದಲು (ದೊಡ್ಡ ಮೊತ್ತದ ಟ್ರ್ಯಾಕ್ ಐಡಿ ಸಣ್ಣ ಮೊತ್ತದ ಬಾಕ್ಸ್‌ಗೆ) ಮಾಡುತ್ತಾನೆ. ಬಳಿಕ ತಾವೇ ಬದಲಿಸಿದ ಸಣ್ಣ ಮೊತ್ತದ ಟ್ರ್ಯಾಕಿಂಗ್ ಐಡಿ (ಬಾಕ್ಸ್‌ನೊಳಗೆ ದುಬಾಯಿ ಸೊತ್ತು) ಹೊಂದಿದ್ದ ಬಾಕ್ಸ್‌ನ್ನು ನೇರ ಪೇಮೆಂಟ್ ಮಾಡುತ್ತಾನೆ. ಇದಾದ ಬಳಿಕ ಆರೋಪಿ ತನ್ನ ೆನ್ ಸ್ವಿಚ್ ಆ್ ಆಯಿತೆಂದು ಹೇಳಿ ಮತ್ತೆ ಬರಲು ತಿಳಿಸುತ್ತಾನೆ. ಡೆಲಿವರಿ ಬಾಯ್ ತನ್ನ ಐಟಂ ಬದಲಾಗಿರುವುದನ್ನು ತಿಳಿಯದೆ ಮತ್ತೆ ಕರೆ ಮಾಡುತ್ತೇನೆಂದು ಹೇಳಿ ನೇರವಾಗಿ ತನ್ನ ಕಚೇರಿಗೆ ತೆರಳುತ್ತಾನೆ. ಇದಾದ ಬಳಿಕ ಆರೋಪಿಗಳು ತಾವು ಆರ್ಡರ್ ಮಾಡಿದ್ದ 11 ಲಕ್ಷ ಮೊತ್ತದ ಸಾಮಗ್ರಿಯನ್ನು ಕ್ಯಾನ್ಸಲ್ ಮಾಡುತ್ತಾರೆ. ಆನ್‌ಲೈನ್ ಕಂಪನಿ ನಿಯಮ ಪ್ರಕಾರ ಯಾರೇ ಆದ್ರೂ ಆರ್ಡರ್ ಕ್ಯಾನ್ಸಲ್ ಮಾಡಿದ ಕೂಡಲೇ ಗ್ರಾಹಕ ನೀಡಿದ್ದ ಹಣ ಮರು ಪಾವತಿಯಾಗುತ್ತದೆ. ಇದರ ಆಧಾರದಲ್ಲಿ ಆರೋಪಿಗಳು ತಮ್ಮ ದೊಡ್ಡ ಮೊತ್ತದ ಸಾಮಗ್ರಿಯನ್ನು ಕ್ಯಾನ್ಸಲ್ ಮಾಡುತ್ತಿದ್ದಂತೆ, ಅವರ ಹಣ ಖಾತೆಗೆ ವರ್ಗಾವಣೆಯಾಗುತ್ತದೆ. ಆದರೆ ಅಷ್ಟರಲ್ಲೇ ಟ್ರ್ಯಾಕಿಂಗ್ ಮಾರ್ಕ್ ತಪ್ಪಿಸಿ, 11 ಲಕ್ಷ ರೂ. ಮೊತ್ತದ ಅತಿ ಮೌಲ್ಯದ ಕ್ಯಾಮರಾಗಳು ಆರೋಪಿಗಳ ಕೈ ಸೇರಿರುತ್ತದೆ. ಮಂಗಳೂರಿನ ಪ್ರಕರಣದಲ್ಲೂ ಕಂಪನಿ ಸಿಬ್ಬಂದಿ ಚೆಕ್ ಮಾಡಿದಾಗ, ಟ್ರಾಕಿಂಗ್ ಐಡಿಯೇ ಬದಲಾಗಿದ್ದು ಕಂಡು ಬಂದಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಡೆಲಿವರಿ ಬಾಯ್ ಮೊಹಮ್ಮದ್ ನಿಶಾಕ್ ಉರ್ವಾ ಪೊಲೀಸರಿಗೂ ದೂರು ನೀಡಿದ್ದರು.
ಆರೋಪಿಗಳಿಗೆ ಶೋಧ: ಸೇಲಂ ಪೊಲೀಸರು ಇದೇ ಮಾದರಿಯ ಪ್ರಕರಣದಲ್ಲಿ ರಾಜ್ ಕುಮಾರ್ ಮೀನಾ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿಯುತ್ತಲೇ ಉರ್ವಾ ಪೊಲೀಸರು ಅಲ್ಲಿಗೆ ದೌಡಾಯಿಸಿದ್ದರು. ಮಂಗಳೂರಿನ ರೀತಿಯದ್ದೇ ಪ್ರಕರಣ ಎಂದು ತಿಳಿದು ಆತನನ್ನು ಬಾಡಿ ವಾರೆಂಟ್ ಪಡೆದು ವಿಚಾರಣೆ ನಡೆಸಿದ್ದಾರೆ. ಜೊತೆಗಾರ ಸುಭಾಸ್ ಗುರ್ಜರ್ ರಾಜಸ್ಥಾನದಲ್ಲಿ ಇರುವುದು ತಿಳಿಯುತ್ತಲೇ ಅಲ್ಲಿಗೆ ತೆರಳಿದ್ದು, ಜೈಪುರದಲ್ಲಿ ಬಂಧನ ಮಾಡಿದ್ದಾರೆ. ಉರ್ವಾ ಠಾಣೆ ಇನ್‌ಸ್ಪೆಕ್ಟರ್ ಭಾರತಿ ನೇತೃತ್ವದ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.