

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆ ಇಲ್ಲಿನ ಪುರಭವನದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಅಖಿಲ ಭಾರತ ಫಿಡೆ ರೇಟೆಡ್ ರ್ಯಾಪಿಡ್ ಚೆಸ್ ಪಂದ್ಯಾವಳಿ ಗುರುವಾರ ಮುಕ್ತಾಯಗೊಂಡಿದ್ದು, ಅಗ್ರ ಶ್ರೇಯಾಂಕಿತ ಆಟಗಾರ ಮಂಗಳೂರಿನ ವಿಯಾನಿ ಆ್ಯಂಟೊನಿಯೊ ಡಿಕುನ್ಹಾ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಜತೆಗೆ ಬ್ಲಿಜ್ ಟೂರ್ನಿಯ ಪ್ರಶಸ್ತಿಯನ್ನೂ ಗೆದ್ದುಕೊಂಡರು.
ಪಂದ್ಯಾವಳಿಯ ಕೊನೆಯ ಸುತ್ತಿನ ಮುಕ್ತಾಯಕ್ಕೆ ಇಂಟರ್ನ್ಯಾಷನಲ್ ಮಾಸ್ಟರ್ಗಳಾದ ವಿಯಾನಿ ಮತ್ತು ತೆಲಂಗಾಣದ ಸಾಯ್ ಅಗ್ನಿ ಜೀವಿತೇಶ್ ತಲಾ 8.5 ಪಾಯಿಂಟ್ ಗಳಿಸಿ ಸಮಬಲ ಸಾಧಿಸಿದ್ದರು. ಉತ್ತಮ ಟೈಬ್ರೇಕರ್ ಆಧಾರದಲ್ಲಿ ವಿಯಾನಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಕೇರಳದ ಮಾತಾರ್ಂಡನ್, ತಮಿಳುನಾಡಿನ ರಾಮನಾಥನ್ ಬಾಲಸುಬ್ರಹ್ಮಣ್ಯಂ, ಕರ್ನಾಟಕದ ಸಿದ್ಧಾಂತ್ ಪೂಂಜಾ, ಲಕ್ಷಿತ್ ಸಾಲಿಯಾನ್, ಕೇರಳದ ಸಾವಂತ್ ಕೃಷ್ಣನ್ ಮತ್ತು ಗೋವಾದ ಚೈತನ್ಯ ಗಾಂವ್ಕರ್ ತಲಾ 7.5 ಪಾಯಿಂಟ್ ಗಳಿಸಿದರು. ಟೈಬ್ರೇಕರ್ ಆಧಾರದಲ್ಲಿ ಅವರಿಗೆ ಕ್ರಮವಾಗಿ 3ರಿಂದ 8ನೇ ಸ್ಥಾನ ನೀಡಲಾಯಿತು. ವಿಜೇತರು 30 ಸಾವಿರ ರೂ. ನಗದು ಮತ್ತು ಟ್ರೋಫಿ, ರನ್ನರ್ ಅಪ್ 20 ಸಾವಿರ ರೂ. ಮತ್ತು ಟ್ರೋಫಿ, ಮೂರನೇ ಸ್ಥಾನ ಗಳಿಸಿದವರು 10 ಸಾವಿರ ರೂ. ಮತ್ತು ಟ್ರೋಫಿ ಪಡೆದರು.
ಬ್ಲಿಜ್ ಟೂರ್ನಿಯಲ್ಲಿ ವಿಯಾನಿ 8.5 ಪಾಯಿಂಟ್ ಕಲೆ ಹಾಕಿದರೆ 8 ಪಾಯಿಂಟ್ ಗಳಿಸಿದ ಮಾತಾರ್ಂಡನ್ ರನ್ನರ್ ಅಪ್ ಆದರು. ಸಾಯ್ ಅಗ್ನಿ ಜೀವಿತೇಶ್ 7.5 ಪಾಯಿಂಟ್ಗಳೊಂದಿಗೆ ಮೂರನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಇವರಿಗೆ ಕ್ರಮವಾಗಿ 5 ಸಾವಿರ ರೂ., 4 ಸಾವಿರ ರೂ. ಮತ್ತು 3 ಸಾವಿರ ರೂ. ಮೊತ್ತದ ಪ್ರಶಸ್ತಿ ನೀಡಲಾಯಿತು. ಕರ್ನಾಟಕದ ದೃಕ್ಷು ವಸಂತ್, ಅಪೂರ್ವ ಕಾಂಬ್ಳೆ, ಕೇರಳದ ಜ್ಯೋತಿಲಾಲ್, ಕರಣ್, ಕರ್ನಾಟಕದ ಆಗಸ್ಟಿನ್, ಗೋವಾದ ಚೈತನ್ಯ ಗಾಂವ್ಕರ್ ಮತ್ತು ಕೇರಳದ ಮಧುಸೂದನನ್ ಕ್ರಮವಾಗಿ 4ರಿಂದ 10ರ ವರೆಗಿನ ಸ್ಥಾನ ಗಳಿಸಿದರು. ಬಹುಮಾನ ವಿತರಣೆ: ಸಮಾರೋಪ ಸಮಾರಂಭದಲ್ಲಿ ಎಂಆರ್ಪಿಎಲ್ನ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಸುದರ್ಶನ್ ಅತಿಥಿಯಾಗಿದ್ದರು. ಜಿಲ್ಲಾ ಚೆಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಸುನಿಲ್ ಆಚಾರ್, ಚೀಫ್ ಆರ್ಭಿಟರ್ ವಸಂತ ಬಿ.ಎಚ್., ಜಿಲ್ಲಾಧ್ಯಕ್ಷ ರಮೇಶ್ ಕೋಟೆ, ಉಪಾಧ್ಯಕ್ಷೆ ಡಾ.ವಾಣಿ ಎಸ್.ಪಣಿಕ್ಕರ್ ಅವರ ಉಪಸ್ಥಿತಿಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.